

ಬ್ಯಾಡಗಿ: ಜ್ಯೋತಿಯು ತಾನುರಿದು ಪರರಿಗೆ ಬೆಳಕು ನೀಡುವಂತೆ ಪ್ರತಿಯೊಬ್ಬರೂ ಸಾಮಾಜಿಕ ಸೇವೆಯ ಮೂಲಕ ಪರೋಪಕಾರಿ ಗುಣ ಬೆಳೆಸಿಕೊಂಡು ಬದುಕಿನಲ್ಲಿ ಸಾಮರಸ್ಯ ಜೀವನ ನಡೆಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಪಟ್ಟಣದ ಕದರಮಂಡಲಗಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 8ನೇ ವರ್ಷದ ಕಾರ್ತಿಕೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಇಷ್ಟಲಿಂಗ ಪೂಜೆ, ಶಿವದೀಕ್ಷೆ ಹಾಗೂ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಎಲ್ಲರ ಜೀವನದಲ್ಲಿ ಕಷ್ಟಗಳು ಬರುವುದ ಸಹಜ, ಮನುಷ್ಯ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟ ಯಾರನ್ನು ನಂಬಬೇಕು ಎಂಬುದನ್ನು ಕಲಿಸುತ್ತದೆ. ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಏನೆಂದು ತಿಳಿಯದು. ನಂಬಿಕೆ, ಸ್ನೇಹ, ವಾತ್ಸಲ್ಯ, ವಿಶ್ವಾಸ ಇವು ಮಾನವ ಜೀವನದ ಅತಿ ದೊಡ್ಡ ಆಸ್ತಿ. ಇವುಗಳನ್ನು ಯಾವಾಗಲೂ ಕಳೆದುಕೊಳ್ಳಬಾರದು. ಯಾವಾಗ ಏನಾಗುವುದೋ ಯಾರಿಗೂ ಗೊತ್ತಿಲ್ಲ. ಏನನ್ನೂ ನಾವು ತೆಗೆದುಕೊಂಡು ಹೋಗುವುದಿಲ್ಲ. ಬದುಕಿರುವಷ್ಟು ದಿನ ಒಳ್ಳೆಯವರ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂದರು.
ಗಳಿಸಿದ ಸಂಪತ್ತು, ಪಡೆದ ಅಧಿಕಾರ, ಏರಿದ ಅಂತಸ್ತು, ಸಂತಸ, ಸಂಭ್ರಮ ಎಲ್ಲವೂ ಸ್ಥಿರವಲ್ಲ. ಮಾಡಿದ ಸತ್ಕಾರ್ಯ ಗಳಿಸಿದ ಅನುಭವ ಶಾಶ್ವತ. ದೇವರು ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟು ಬಾಳಬೇಕು. ಆಧುನಿಕ ಒತ್ತಡಗಳ ಬದುಕಿನಲ್ಲಿ ನಾವು ಧರ್ವಚರಣೆ, ಸಂಸ್ಕೃತಿಯಿಂದ ದೂರ ಸರಿಯಬಾರದು. ಪರಂಪರೆ, ಸಂಸ್ಕೃತಿ, ಧರ್ಮ ಇವುಗಳು ಉಳಿದಾಗ ಮಾತ್ರ ಮಾನವ ಜೀವನ ಉನ್ನತಿ ಸಾಧ್ಯ. ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಧರ್ಮವೊಂದೇ ಆಶಾಕಿರಣ. ಧರ್ಮದ ಆದರ್ಶ ಮೌಲ್ಯಗಳನ್ನು ಬೆಳೆಸುವ ಉಳಿಸುವ ಭಾವ ಎಲ್ಲರಲ್ಲಿ ಬೆಳೆಯಬೇಕು ಎಂದರು.
ಇದಕ್ಕೂ ಮುನ್ನ ಜಂಗಮವಟುಗಳಿಗೆ ಶಿವದೀಕ್ಷೆ ಸಂಸ್ಕಾರ ನೀಡಲಾಯಿತು. ಬಳಿಕ ಭಕ್ತರು ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳು ಆಶೀರ್ವಾದ ಪಡೆದರು.
ಧರ್ಮಸಭೆಯಲ್ಲಿ ಗುಡ್ಡದಮಲ್ಲಾಪುರ ದಾಸೋಹಮಠದ ಮೂಕಪ್ಪ ಸ್ವಾಮೀಜಿ, ಬಂಕಾಪುರದ ಅರಳೆಲೆಮಠದ ರೇವಣಸಿದ್ಧೇಶ್ವರ ಶ್ರೀಗಳು, ರಾಣೆಬೆನ್ನೂರು ಶನೀಶ್ವರಮಠದ ಶಿವಯೋಗಿ ಶ್ರೀ, ಮಳಲಿ ಸಂಸ್ಥಾನಮಠದ ಗುರುನಾಗಭೂಷಣ ಶ್ರೀ, ಬ್ಯಾಡಗಿ ಮುಪ್ಪಿನೇಶ್ವರಮಠದ ಚನ್ನಮಲ್ಲಿಕಾರ್ಜುನ ಶ್ರೀ, ಗುಬ್ಬಿನಂಜುಂಡೇಶ್ವರಮಠದ ನಂಜುಂಡ ಪಂಡಿತಾರಾಧ್ಯ ಶ್ರೀಗಳು, ಶ್ರೀ ಗುರುಮಹೇಶ್ವರ ಸ್ವಾಮೀಜಿ, ಕಡೆನಂದಿಹಳ್ಳಿಯ ರೇವಣಸಿದ್ಧೇಶ್ವರ ಶ್ರೀ, ಕುಮಾರಪಟ್ಟಣ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಶ್ರೀ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶ್ರೀ, ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ವಿ.ವಿ.ಹಿರೇಮಠ, ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿಗಳು ದಾಸೋಹಮಠ, ವೇ. ರಾಚಯ್ಯಸ್ವಾಮಿಗಳು ಓದಿಸೋಮಠ, ಸಮಾಜ ಸೇವಕ ಮುರಿಗೆಪ್ಪ ಶೆಟ್ಟರ, ಕೆ. ರವೀಂದ್ರ, ಭಾರತಿ ಪೂಜಾರ, ಲಕ್ಷ್ಮೀ ನಾರಾಯಣ ಮೇಲಗಿರಿ, ಪುಂಡಲೀಕಪ್ಪ ನವಲೆ, ಮಲ್ಲಿಕಾರ್ಜುನ ಸಂಕಣ್ಣನವರ, ಎಂ.ಎಂ. ಕೆಂಬಿ, ಗಿರೀಶಸ್ವಾಮಿ ಇಂಡಿಮಠ, ಅಶೋಕ ಮುತ್ತೂರು ಇತರರಿದ್ದರು. ಡಾ. ಗುರುಪಾದಯ್ಯ ಸಾಲಿಮಠ ಹಾಗೂ ಸಾಯಿಮಂದಿರ ಧರ್ಮದರ್ಶಿ ಮಂಜಯ್ಯಶಾಸ್ತ್ರೀಗಳು ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.