ಕ್ರೀಡೆಗೆ ಅನುದಾನ ಮೀಸಲಿರಿಸಿ

30-byd-1 sports
Published on

ಬ್ಯಾಡಗಿ: ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾ ಚಟುವಟಿಕೆಗಳಿಗೆ ಅಲ್ಪಪ್ರಮಾಣದಲ್ಲಿ ಅನುದಾನ ನೀಡುವ ಮೂಲಕ ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಪ್ರತಿವರ್ಷ ಸ್ಥಳೀಯ ಸಂಸ್ಥೆಗಳ ಬಜೆಟ್​ನಲ್ಲಿ ಶೇ. 20ರಷ್ಟು ಅನುದಾನ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡುವಂತಾಗಬೇಕು ಎಂದು ಪುರಸಭೆ ಸದಸ್ಯ ಬಸವರಾಜ ಛತ್ರದ ಹೇಳಿದರು.

ಪಟ್ಟಣದ ಎಸ್​ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಷಿಯೇಶನ್ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಾಕಿ ಆಟಗಾರ ಧ್ಯಾನಚಂದ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಕಬಡ್ಡಿ ಆಟಕ್ಕೆ ಈಗ ಹೆಚ್ಚು ಬೇಡಿಕೆಯಿದ್ದು, ದೇಶಾದ್ಯಂತ ಕಬಡ್ಡಿ ಆಟಗಾರರಿಗೆ ವಿಶೇಷ ಮಾನ್ಯತೆ ದೊರಕುತ್ತಿದೆ. ಗ್ರಾಮೀಣ ಸೇರಿ ಪಟ್ಟಣದಲ್ಲಿ ಗುರುತಿಸಿಕೊಂಡಿರುವ ಬಾಲ ಕ್ರೀಡಾಪಟುಗಳಿಗೆ ಸರ್ಕಾರ ನೆರವು ದೊರೆಯುತ್ತಿಲ್ಲ. ಕ್ರೀಡಾಂಗಣಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ವಿಶೇಷ ಕ್ರೀಡಾ ಅನುದಾನ ಮಂಜೂರು ಮಾಡದಿದ್ದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹಿನ್ನೆಡೆಯಾಗಲಿದೆ ಎಂದರು.

ತಾಲೂಕು ಕ್ರೀಡಾಂಗಣಕ್ಕೆ ಹಾವೇರಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಸಮರ್ಪಕ ಸೌಲಭ್ಯ ಒದಗಿಸುತ್ತಿಲ್ಲ. ಮಹಿಳಾ ಆಟಗಾರರಿಗೆ ಹಾಗೂ ಸಾರ್ವಜನಿಕರಿಗೆ ಇಂದಿಗೂ ಶೌಚಗೃಹ ಸೇರಿದಂತೆ ಕೆಲ ಸೌಲಭ್ಯಗಳಿಲ್ಲವಾಗಿದೆ. ಈ ಕುರಿತು ಹಲವು ಬಾರಿ ಧ್ವನಿ ಎತ್ತಿದರೂ ಅಧಿಕಾರಿಗಳು ಜಾಣ ಮೌನ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಎ.ಟಿ. ಪೀಠದ ಮಾತನಾಡಿ, ಧ್ಯಾನಚಂದ ಭಾರತದ ಶ್ರೇಷ್ಠ ಹಾಕಿ ಆಟಗಾರ. ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸತತ 400 ಗೋಲು ಗಳಿಸಿದ್ದಾರೆ. ಜರ್ಮನಿ ತಮ್ಮ ದೇಶದ ಪರವಾಗಿ ಆಟ ಆಡಲು ಕೋರಿದರೂ ದೇಶಾಭಿಮಾನ ಹಾಗೂ ಭಾರತದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡ ಶ್ರೇಷ್ಠ ಕ್ರೀಡಾಪಟು ಎಂದು ಬಣ್ಣಿಸಿದರು.

ತಹಸೀಲ್ದಾರ್ ಫೀರೋಜ್​ಷಾ ಸೋಮನಕಟ್ಟೆ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಈರಣ್ಣ ಬಣಕಾರ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಷಿಯೇಷನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಗೌರವಾಧ್ಯಕ್ಷ ಗಂಗಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ, ನಿರ್ದೇಶಕಿ ಮಂಜುಳಾ ಭಜಂತ್ರಿ, ಹಿರಿಯ ಕಬ್ಬಡಿ ಆಟಗಾರ ಪ್ರಕಾಶ ತಾವರಗಿ, ಎಂ.ಆರ್. ಕೋಡಿಹಳ್ಳಿ, ರಮೇಶ ಕರಬಣ್ಣನವರ, ಜೀವನ್ ಇಟಗಿ, ಪ್ರಶಾಂತ ಯಾದವಾಡ, ದುರ್ಗೆಶ ಒಂದುಬಾಗಿಲು ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net