147 ಕೆರೆಗಳನ್ನು ತುಂಬಿಸಲು ಡಿಪಿಆರ್ ತಯಾರಿ

byadagi shivanna
Published on

ಬ್ಯಾಡಗಿ: ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ 122 ಕೋಟಿ ರೂಪಾಯಿ ವೆಚ್ಚದಲ್ಲಿ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಸೇರಿ ಪೈಪ್‌ಲೈನ್ ಮೂಲಕ ಒಟ್ಟು 147 ಕೆರೆಗಳನ್ನು ತುಂಬಿಸಲು ಡಿಪಿಆರ್ ಸಿದ್ಧವಾಗಿದ್ದು, ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಹಾನಗಲ್ಲ ತಾಲೂಕು ಬ್ಯಾತನಾಳ ಗ್ರಾಮದ ಬಳಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ನಲ್ಲಿ ನೀರೆತ್ತುವ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ರೈತರು ಕಾಲುವೆಗಳಲ್ಲಿ ಪೈಪ್‌ಲೈನ್ ಮೂಲಕ ನೀರು ಹರಿಸಿ ಎಲ್ಲ ಕೆರೆಗಳಿಗೆ ತುಂಬಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಇಂಜಿನಿಯರ್ ಸೇರಿ ನೀರಾವರಿ ನಿಗಮದ ಅಧಿಕಾರಿಗಳ ಕಾಳಜಿಯಿಂದ ಡಿಪಿಆರ್ ಸಿದ್ಧವಾಗಿದೆ. ಶೀಘ್ರದಲ್ಲೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಟೆಂಡರ್ ಕರೆಯಲಾಗುವುದು. ರೈತರಿಗೆ ಶಾಶ್ವತ ನೀರಾವರಿ ಒದಗಿಸಲಾಗುವುದು ಎಂದರು.
ಈ ಹಿಂದೆ ಚಿಕ್ಕಬಾಸೂರು ಬಹುಗ್ರಾಮ ಕುಡಿಯುವ ನೀರು ಯೋಜನೆ, ಕಾಗಿನೆಲೆ ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಿದ್ದೆ.
ಬಳಿಕ ಅಸುಂಡಿ, ಆಣೂರು ಕೆರೆ ತುಂಬಿಸುವ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಲೂ ರೈತರಿಗೆ ಹೊಸ ಯೋಜನೆ ಜಾರಿಗೊಳಿಸಲು ಬದ್ಧನಾಗಿರುವೆ. ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ರೈತಪರ ನಿಲುವು ಹೊಂದಿದ್ದೇನೆ ಎಂದರು.
ಇಂಜಿನಿಯರ್ ನಿರ್ಲಕ್ಷ್ಯ ಸಹಿಸಲ್ಲ: ತಾಲೂಕಿನ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಗುಡ್ಡದಮಲ್ಲಾಪುರ ಏತನೀರಾವರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಕಾಗಿನೆಲೆ, ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇಂಜಿನಿಯರ್‌ಗಳ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಹಿಂದಿನ ವರ್ಷ ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಸಾಕಷ್ಟು ಸಮಸ್ಯೆ ತಲೆದೋರಿವೆ ಎನ್ನುವ ದೂರುಗಳು ರೈತರಿಂದ ಕೇಳಿಬಂದಿವೆ. ಮಳೆ ಕೊರತೆಯಿಂದ ರೈತಸಮೂಹ ತೀವ್ರ ಸಂಕಷ್ಟದಲ್ಲಿದ್ದು, ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಗೆ ಇದೆ. ಈ ಬಾರಿ ಅಂತಹ ಸಮಸ್ಯೆ ಉದ್ಭವಿಸಿದಂತೆ ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಜಗದೀಶ ಕಣಗಲಭಾವಿ, ಪ್ರಭುಗೌಡ ಪಾಟೀಲ, ಮಂಜನಗೌಡ ಲಿಂಗನೌಡ್ರ, ರುದ್ರಣ್ಣ ಹೊಂಕಣದ, ಮಾರುತಿ ಅಚ್ಚಿಗೇರಿ, ಬಂಗಾರೇಶ ಪೂಜಾರ, ವೀರನಗೌಡ ಪಾಟೀಲ, ಲಿಂಗರಾಜ ಕುಮ್ಮೂರ, ಮಹದೇವಪ್ಪ ಓಲೇಕಾರ, ಕೆಂಚಪ್ಪ ದೊಡ್ಮನಿ, ಯುಟಿಪಿ ಇಂಜಿನಿಯರ್
ಎಂ. ಬಸವರಾಜ, ಎಚ್. ರುದ್ರಪ್ಪ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net