

ಬ್ಯಾಡಗಿ: ದೈಹಿಕ ಶ್ರಮ ಹಾಗೂ ಸರಳ ಜೀವನದೊಂದಿಗೆ ಗುಣಮಟ್ಟದ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಯ್ದುಕೊಂಡು ಶತಾಯುಷಿಯಾಗಿರುವ ಹಿರಿಯಜೀವಿಗಳ ಜೀವನ ನಮಗೆ ಮಾದರಿಯಾಗಿವೆ ಎಂದು ಜೈವಿಕ ಇಂಧನ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಜಿಆರ್ ಮೆಡಿಕಲ್ ಕಾಲೇಜು ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು, ಬಾವಿಯಿಂದ ನೀರೆತ್ತುವ, ಬೀಸುವ, ಕುಟ್ಟುವ ಹಾಗೂ ಸೈಕಲ್ ಓಡಿಸುವ, ಬೇಸಾಯ ಪದ್ದತಿ ದೈಹಿಕ ಶ್ರಮ ನೀಡುತ್ತಿತ್ತು. ಆಧುನಿಕ ವ್ಯವಸ್ಥೆಯಲ್ಲಿ ಮನೆಯ ಮಹಿಳೆಯರು ನಿತ್ಯಕೆಲಸಗಳನ್ನು ಯಂತ್ರಗಳಿಗೆ ಹೊಂದಿಕೊಂಡ ಪರಿಣಾಮ ರೋಗಗಳು ಹೆಚ್ಚಿವೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕೊರತೆಯಿಂದ ಸಕ್ಕರೆ ಕಾಯಿಲೆಗಳು ಎಲ್ಲೆಡೆ ಆವರಿಸಿದೆ. ಆಧುನಿಕ
ಜೀವನಶೈಲಿ ಪಟ್ಟಣದ ಕೆಲವರಿಗೆ ಅಗತ್ಯವಿದೆ. ಆದರೆ, ಎಲ್ಲರೂ ಇದಕ್ಕೆ ಮಾರುಹೋಗಿ ದೇವರು ಕೊಟ್ಟ ಉತ್ತಮ ಆರೋಗ್ಯ ಕಳೆದುಕೊಂಡು ಆಸ್ಪತ್ರೆಯತ್ತ ಮುಖ ಮಾಡಿರುವುದು ವಿಷಾದನೀಯ ಎಂದರು.
ಗುಳಿಗೆ ತಿನ್ನುವ ಪರಿಪಾಠ: ಸಕ್ಕರೆ ಕಾಯಿಲೆ, ಬಿಪಿ ಸೇರಿ ಹಲವು ರೋಗಗಳಿಗೆ ಎಲ್ಲರ ಮನೆಯಲ್ಲಿ ಕಾಯಂ ಸದಸ್ಯರಿದ್ದಾರೆ. ಹೃದಯ ರೋಗ, ಕ್ಯಾನ್ಸರ್, ಎಲುಬು, ಕೀಲು ಬೇನೆ ಸಹಜವಾಗಿ ಹೆಚ್ಚಾಗುತ್ತಿವೆ. ಎರಡು ವರ್ಷದ ಹಿಂದೆ ಕರೊನಾ ಮಹಾಮಾರಿ ವಿಶ್ವಾದ್ಯಂತ ಆವರಿಸಿ ಎಲ್ಲೆಡೆ ಭಯದ ವಾತಾವರಣ ಉಂಟುಮಾಡುವ ಜೊತೆ ಆರೋಗ್ಯಶೈಲಿ, ಜಾಗೃತಿ ಮುಟ್ಟಿಸಿದೆ. ಆದರೆ, ಈಗ ಎಲ್ಲರ ಮನೆಯಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ಗುಳಿಗೆ ತಿನ್ನಲೆಬೇಕಿದ್ದು, ನಾವೆಲ್ಲ ಔಷಧ ಅಂಗಡಿ ಹಾಗೂ ಆಸ್ಪತ್ರೆಗಳಿಗೆ
ಕಾಯಂ ಸದಸ್ಯರಾಗಿದ್ದೇವೆ. ಯುವಪೀಳಿಗೆ ಹೊಲಗಳತ್ತ ಮುಖ ಮಾಡುತ್ತಿಲ್ಲ, ಕಲಿತ ಶಿಕ್ಷಣವನ್ನು ನಾವು ಕೃಷಿಯಲ್ಲಿ ತೊಡಗಿಸಿದ್ದರೆ, ಹೊಸ ಆವಿಷ್ಕಾರ ಮಾಡಬಹುದಾಗಿದೆ. ದೇಶೀಯ ತಳಿಯ ಶುದ್ಧ ಹಾಲು, ಕ್ರೀಮಿನಾಶಕ ಇಲ್ಲದ ಸೊಪ್ಪು,
ತರಕಾರಿ, ಹಣ್ಣು ಹಂಪಲುಗಳು ಲಭ್ಯವಾಗುತ್ತಿಲ್ಲ. ತಿನ್ನುವ ಆಹಾರ ಶುದ್ದವಾಗಿಲ್ಲದಿದ್ದರೆ, ಕಾಯಿಲೆಗಳು ವಿಪರೀತವಾಗಿ, ತೊಂದರೆ ಹೆಚ್ಚಲಿವೆ ಎಂದರು.
ಕೆಲ ಸ್ವಯಂ ಸೇವಾಸಂಘ, ಸಂಸ್ಥೆಗಳ ಆಸ್ಪತ್ರೆಯವರು ಗ್ರಾಮೀಣ ಪ್ರದೇಶಕ್ಕೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕಡಿಮೆ ವೆಚ್ಚದಲ್ಲಿ ಔಷಧೋಪಚಾರ ಮಾಡಲಿದ್ದಾರೆ. ಗ್ರಾಮಸ್ಥರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಅಲ್ಲಿಯ ದುಬಾರಿ ವೆಚ್ಚದ ಹಣ ನೀಡಲು ಸಾಧ್ಯವಾಗುವುದಿಲ್ಲ, ಮನೆ ಬಾಗಿಲಿಗೆ ಬಂದಿರುವ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ಒಟ್ಟು 200 ಗ್ರಾಮಸ್ಥರು ತಪಾಸಣೆಯಲ್ಲಿ ದಾಖಲಾಗಿದ್ದು, 13 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.
ಡಾ. ಎಂ. ಪ್ರವೀಣ, ಡಾ. ಅಶೋಕ, ಎಸ್‌ಡಿಎಂಸಿ ಅಧ್ಯಕ್ಷ ಶಂಭಣ್ಣ ಯಲಿಗಾರ, ಗ್ರಾಪಂ ಅಧ್ಯಕ್ಷ ಚಿನ್ನಪ್ಪ ಹೊಸಮನಿ, ಸದಸ್ಯರಾದ ಭೀಮಮ್ಮ ಮುಳಗುಂದ, ನೇತ್ರಾವತಿ ದೊಡ್ಡಮನಿ, ಪರಿಧಾಬಿ ನದಾಫ್, ಮಲ್ಲಪ್ಪ ಡಮ್ಮಳ್ಳಿ ಇತರರಿದ್ದರು. ಶಿಕ್ಷಕ ಜೆ.ಎಚ್. ಛತ್ರದ, ಎಸ್.ಬಿ. ಹಣಗಿ, ಶಂಕರ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.