

ಬ್ಯಾಡಗಿ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ಒಣಗಿದ್ದರಿಂದ ರೈತರು ಆತಂಕದಲ್ಲಿದ್ದಾರೆ. ಜನಪ್ರತಿನಿಧಿಗಳು ರೈತರಿಗೆ ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ. ಸೆ. 13ರೊಳಗೆ ಹಾವೇರಿ ಜಿಲ್ಲೆಯನ್ನು ಬರಗಾಲ ಪಟ್ಟಿಯಲ್ಲಿ ಸೇರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಹಾವೇರಿಯಲ್ಲಿ ಸೆ. 13ರಂದು ಹಮ್ಮಿಕೊಂಡ ರಸ್ತೆ ಸಂಚಾರ ತಡೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಅಂಗವಾಗಿ ಶನಿವಾರ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂಗಾರು ಮಳೆ ಕೊರತೆಯಿಂದ ಬೆಳೆ ವೈಫಲ್ಯ ಹಾಗೂ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯಿಲ್ಲದೆ ರೈತರು ತೀವ್ರ ತೊಂದರೆಗೆ ಸಿಲುಕಿ, ಬೆಳೆ ಕಳೆದುಕೊಂಡಿದ್ದಾರೆ. ಈ ಮಧ್ಯೆ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ಕೊಳವೆ ಬಾವಿಯಿಂದ ನೀರೇತ್ತಲು ಆಗದೇ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ನ್ಯಾಯ ದೊರಕಿಸಿ ಕೊಡುವಂತೆ ತಹಸೀಲ್ದಾರ್ ಕಾರ್ಯಾಲಯ ಎದುರು ಆಗ್ರಹಿಸಿದರೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ. ರೈತರು ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಸಾಲಸೋಲಗಳಲ್ಲಿ ಸಿಲುಕಿದ ರೈತರು ಅನಿವಾರ್ಯವಾಗಿ ಬೇಸತ್ತ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ನ್ಯಾಯ ತುರ್ತು ಪರಿಹಾರ ನೀಡಬೇಕಿದೆ. ಆದರೆ, ಶಾಸಕರು, ಸಚಿವರು ರೈತಪರ ಧ್ವನಿ ಎತ್ತದೆ, ಸರ್ಕಾರ ರಕ್ಷಣೆಗೆ ನಿಂತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಬೆಳೆ ವರದಿಯನ್ನು ಸರ್ಕಾರ ಪಡೆದು, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪಟ್ಟಿಯಲ್ಲಿ ಸೇರಿಸಿ, ತುರ್ತಾಗಿ ಪರಿಹಾರ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸೆ. 13 ರೊಳಗೆ ಘೋಷಣೆ ಮಾಡದಿದ್ದಲ್ಲಿ ಜನಪ್ರತಿನಿಧಿಗಳ ಮನೆಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ರೈತಸಂಘ ನಿರ್ಧಾರ ಪ್ರಕಟಿಸಲಿದೆ ಎಂದು ಎಚ್ಚರಿಸಿದರು. ನಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದರು. ರೈತಮುಖಂಡರಾದ ಗಂಗಣ್ಣ ಎಲಿ, ಕಿರಣ ಗಡಿಗೋಳ, ಜಾನ ಪುನೀತ್ ದಾನಪ್ಪ ಬಳ್ಳಾರಿ, ನಂಜುಂಡಸ್ವಾಮಿ ಹಾವೇರಿಮಠ, ಗುಡ್ಡಪ್ಪ ಹೊಮ್ಮರಡಿ, ಮಹದೇವಪ್ಪ ಹಾವನೂರು, ಚಿಕ್ಕಪ್ಪ ಛತ್ರದ, ಕುಮಾರ ಬನ್ನಿಹಟ್ಟಿ, ಪ್ರಕಾಶ ಬನ್ನಿಹಟ್ಟಿ, ಜಗದೀಶ ಭಂಡಾರಿ, ಇತರರಿದ್ದರು.