

ಬ್ಯಾಡಗಿ: ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣದಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗುರುವಾರ ರೈತರಿಗೆ ಪರದಾಟ, ದಲ್ಲಾಳಿಗಳು, ಖರೀದಿದಾರರಿಗೆ ಆತಂಕ ಎದುರಾಗಿತ್ತು. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಮೆಣಸಿನಕಾಯಿ ಮಾರುಕಟ್ಟೆಯ ಆವರಣದಲ್ಲಿ ನೀರು ಹರಿದಿದೆ. ಟೆಂಡರ್ನಲ್ಲಿ ಮೆಣಸಿನಕಾಯಿ ಬೆಲೆ ಇಳಿಮುಖವಾಗಿದೆ.
ಸೋಮವಾರ ಯುಗಾದಿ ಹಬ್ಬದ ನಿಮಿತ್ತ ಮಾರುಕಟ್ಟೆಗೆ ರಜೆ ಘೊಷಿಸಲಾಗಿತ್ತು. ಹೀಗಾಗಿ ರೈತರು 2 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ತಂದಿದ್ದಾರೆ. ಆದರೆ, ಬುಧವಾರ ರಾತ್ರಿಯಿಂದ ಮಳೆರಾಯನ ಕಾಟ ಶುರುವಾಗಿದ್ದು, ಮಧ್ಯಾಹ್ನ ತೀವ್ರ ಮಳೆ ಸುರಿದಿದೆ. ಇದರಿಂದ ದಲ್ಲಾಳಿ ಅಂಗಡಿಯವರು ಮೆಣಸಿನಕಾಯಿ ಮೇಲೆ ತಾಡಪಾಲ ಎಳೆದು ರಕ್ಷಣೆಗೆ ಮುಂದಾದರು. ಕೂಲಿಕಾರರು ಹಾಗೂ ಹಮಾಲರ ಪೇಚಾಟ ಜೋರಾಗಿತ್ತು. ರೈತರಿಗೆ ಚೀಲಗಳು ಮಳೆಯಲ್ಲಿ ಸಿಲುಕಿರುವುದು, ಬೆಲೆ ಕುಸಿತದಿಂದ ತೀವ್ರ ಸಂಕಟಕ್ಕೆ ಒಳಗಾದರು.
ದಿಢೀರ್ ಬೆಲೆ ಕುಸಿತಕ್ಕೆ ಬೇಸರ
ಕಳೆದ ವಾರ ಕಡ್ಡಿ ಮೆಣಸಿನಕಾಯಿ 22 ಸಾವಿರ ರೂ.ಗಳಿಗೆ ಮಾರಾಟವಾಗಿದ್ದು, ಗುರುವಾರ 20 ಸಾವಿರ ರೂ.ಗಳಿಗೆ ತಲುಪಿದೆ. ಡಬ್ಬಿ ತಳಿ ಹಿಂದಿನ ವಾರ 23 ಸಾವಿರ ರೂ.ವರೆಗೆ ಇತ್ತು. ಇಂದು 22 ಸಾವಿರ ರೂ.ಗಳಾಗಿದೆ. ಒಟ್ಟಾರೆ 1ರಿಂದ 3 ಸಾವಿರ ರೂ.ವರೆಗೂ ಬೆಲೆಗಳಲ್ಲಿ ವ್ಯತ್ಯಾಸವಾಗಿದೆ. ಹವಾಮಾನ ತಂಪಾಗಿರುವ ಕಾರಣ ಖರೀದಿದಾರರಿಗೂ ದೊಡ್ಡ ಸಮಸ್ಯೆಯಾಗಿದೆ. ಖರೀದಿಸಿದ ಲಕ್ಷಾಂತರ ಚೀಲಗಳನ್ನು ಸುರುವಿ ಒಣಗಿಸಿ ಚೀಲ ತುಂಬಬೇಕಿದೆ. ರೈತರು ನೀರು ಚಿಮುಕಿಸಿದ ಮೆಣಸಿನಕಾಯಿಗಳನ್ನು ಒಣಗಿಸದಿದ್ದಲ್ಲಿ ಫಂಗಸ್ ಉಂಟಾಗಿ ಖರೀದಿದಾರರಿಗೆ ನಷ್ಟವಾಗಲಿದೆ.