

ಬ್ಯಾಡಗಿ: ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಹೊರರಾಜ್ಯದವರಿಗೆ ದಲ್ಲಾಳಿ ಅಂಗಡಿ ಆರಂಭಿಸಲು ಹಾಗೂ ಟೆಂಡರ್ ಹಾಕಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರವೇ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಶನಿವಾರ ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಮಾಲತೇಶ ಹೆಬಸೂರು ಮಾತನಾಡಿ, ಬ್ಯಾಡಗಿ ಮಾರುಕಟ್ಟೆ ಸುಮಾರು ಏಳೆಂಟು ದಶಕಗಳ ಕಾಲ ವ್ಯಾಪಾರ ವಹಿವಾಟಿನ ಮೂಲಕ ವಿಶ್ವವಿಖ್ಯಾತಿ ಹೊಂದಿದೆ. ಅಲ್ಲದೆ, ಇಲ್ಲಿ ರೈತರಿಗೆ ಆನ್ಲೈನ್ ಪೇಮೆಂಟ್, ಗುಣಮಟ್ಟದ ಬೆಲೆ ನಿಗದಿ, ವರ್ತಕರ ಪ್ರಾಮಾಣಿಕ ವ್ಯವಹಾರದಿಂದಾಗಿ ವ್ಯವಹಾರ ಈಗ ಸಾಗರದಾಚೆಗೂ ತಲುಪಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 3 ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಶುಲ್ಕ ಸಂಗ್ರಹಿಸಿ ನಂ. 1 ಸ್ಥಾನ ಪಡೆದಿದೆ. ಇದಕ್ಕೆ ಸ್ಥಳೀಯ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಸೇರಿ ಪದಾಧಿಕಾರಿಗಳ ಶ್ರಮ ಕಾರಣ. ಇಲ್ಲಿನ ವರ್ತಕರಿಗೆ ಸಲಹೆ-ಸೂಚನೆ, ನಿಬಂಧನೆಗಳ ಮೂಲಕ ರೈತರ ಹಾಗೂ ವರ್ತಕರ ಹಿತ ಕಾಯುತ್ತಿದ್ದಾರೆ. ಆದರೆ, ಈ ಹಿಂದೆ ಆಂಧ್ರ ಪ್ರದೇಶದ ಕೆಲವರಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಸ್ಥಳೀಯ ವ್ಯಾಪಾರಸ್ಥರೊಬ್ಬರ ಸಹಕಾರದಿಂದ ಈಚೆಗೆ ಜರುಗಿದ ವರ್ತಕರ ಸಂಘದ ವಾರ್ಷಿಕ ಸಭೆಯಲ್ಲಿ ತಮಿಳುನಾಡು ಮೂಲದ ವ್ಯಾಪಾರಸ್ಥರೊಬ್ಬರು ಈ ಬಾರಿ ಸ್ಥಳೀಯ ಮಾರುಕಟ್ಟೆಯ ಎಪಿಎಂಸಿಯಿಂದ ಅನುಮತಿಗಾಗಿ (ವ್ಯಾಪಾರದ ಪರವಾನಗಿ) ಪಡೆಯಲು ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಹೊರರಾಜ್ಯದವರಿಗೆ ಹಾಗೂ ಇಂತಹವರಿಗೆ ಬೆಂಬಲಿಸುವ ಸ್ಥಳೀಯ ವರ್ತಕರಿಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಅವಕಾಶ ನೀಡಬಾರದು. ಒಂದು ವೇಳೆ ಹೊರರಾಜ್ಯದವರಿಗೆ ಅವಕಾಶ ನೀಡಿದಲ್ಲಿ ಎಪಿಎಂಸಿ ಕಾರ್ಯಾಲಯ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಳಿಕ ಮೆಣಸಿನಕಾಯಿ ವರ್ತಕರ ಸಂಘದ ಜಂಟಿ ಕಾರ್ಯದರ್ಶಿ ಮಾಲತೇಶ ಆಲದಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರವೇ (ಪ್ರವೀಣ ಶೆಟ್ಟಿ) ಬಣದ ಜಿಲ್ಲಾಧ್ಯಕ್ಷ ಹನುಮಂತ ಭೋವಿ, ಸಂಜೀವ ಮಡಿವಾಳರ, ಸುರೇಶ ಚಲವಾದಿ, ಗಿರೀಶ ವಡ್ಡರ, ಕುಮಾರ ಮಂಚಿಕೊಪ್ಪ, ಫಕೀರಪ್ಪ ಮ್ಯಾಗೇರಿ, ವಿಶ್ವನಾಥ ಭೋವಿ, ವಿಕ್ರಮ ಮಾಳಗಿ, ಮಂಜುನಾಥ ದೊಳ್ಳಿ ಇತರರಿದ್ದರು.