ಆರೋಗ್ಯವಂತ ಯುವಕರು ರಕ್ತದಾನ ಮಾಡಲಿ

16-BYD-1 BLOOD
Published on

ಬ್ಯಾಡಗಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಯುವಸೇವಾ ಸಮಿತಿ ಹಾಗೂ ಪರಿಸರ ಸ್ನೇಹ ಬಳಗದ ನೇತೃತ್ವದಲ್ಲಿ ಬುಧವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ತುರ್ತು ಅಪಘಾತ ಸೇರಿ ಜೀವ ಹೋಗುವ ಸಂದರ್ಭದಲ್ಲಿ ಇನ್ನೊಂದು ಜೀವ ಬದುಕಿಸಲು ರಕ್ತ ಬೇಕೇ ಬೇಕು. ಜಿಲ್ಲಾ ರಕ್ತ ಭಂಡಾರದಲ್ಲಿ ಅಗತ್ಯಕ್ಕೆ ತಕ್ಕಷ್ಟು ರಕ್ತ ಸಂಗ್ರಹದ ಕೊರತೆಯಿದ್ದು, ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಟ್ಟರಾಜ ಮಾತನಾಡಿ, ವರ್ಷಕ್ಕೊಮ್ಮೆ ರಕ್ತದಾನ ಮಾಡುವುದದಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಸೇರಿ ರಕ್ತ ಶುದ್ಧತೆಗೆ ಅವಕಾಶ ಸಿಗಲಿದೆ. ಕೆಲವೊಮ್ಮೆ ಬಡವರು ಹಣ ಕೊಟ್ಟು ರಕ್ತ ತರಿಸಿಕೊಳ್ಳಲು ಸಾಧ್ಯವಾಗದೆ ಮೃತಪಟ್ಟ ಘಟನೆಗಳು ನಡೆದಿವೆ. ಅನಿವಾರ್ಯವಾಗಿ ಎಲ್ಲ ಆಸ್ಪತ್ರೆಗಳಲ್ಲಿ ರಕ್ತ ಭಂಡಾರದ ಅಗತ್ಯತೆಯೂ ಇದೆ. ಕಾರಣ ಸಾರ್ವಜನಿಕರು ಆಗಾಗ ಏರ್ಪಡಿಸುವ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದರು.

ಶಿಬಿರದಲ್ಲಿ 26 ಜನ ರಕ್ತದಾನ ಮಾಡಿದರು. ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ನಿವೃತ್ತ ಪ್ರಾಂಶುಪಾಲ ಶಿವಾನಂದ ಯಮನಕ್ಕನವರ, ವಾಲ್ಮೀಕಿ ಸಮಾಜ ಮುಖಂಡ ಹೊನ್ನೂರಪ್ಪ ಕಾಡಸಾಲಿ, ಬಸವರಾಜ ಭೀಮಕ್ಕನವರ, ಪರಿಸರ ಸ್ನೇಹ ಬಳಗದ ಅಧ್ಯಕ್ಷ ಮೋಹನಕುಮಾರ ಹುಲ್ಲತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net