ಬ್ಯಾಡಗಿಯ ಬಿಇಎಸ್, ಹಾವೇರಿ ಜಿ.ಎಚ್. ಕಾಲೇಜ್​ಗೆ ಪ್ರಶಸ್ತಿ

Byadagi BES, HAVERI G.H. college are winner
Published on

ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಅಂತರ ಕಾಲೇಜ್ ಕಬಡ್ಡಿ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಅತಿಥೇಯ ಬ್ಯಾಡಗಿ ಬಿಇಎಸ್ ಕಾಲೇಜ್ ಹಾಗೂ ಪುರುಷರ ವಿಭಾಗದಲ್ಲಿ ಹಾವೇರಿ ಜಿ.ಎಚ್. ಕಾಲೇಜ್ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡವು.

ಪಟ್ಟಣದ ಬಿಇಎಸ್ ಕಾಲೇಜ್ ಆವರಣದಲ್ಲಿ ಎರಡು ದಿನ ಆಯೋಜಿಸಿದ್ದ ಕ್ರೀಡಾಕೂಟದ ಕೊನೆಯ ದಿನ ಶುಕ್ರವಾರ ಮಹಿಳೆಯರ ವಿಭಾಗದ ಅಂತಿಮ ಪಂದ್ಯದಲ್ಲಿ 19(45-26) ಅಂಕಗಳಿಂದ ಬಿಇಎಸ್ ಕಾಲೇಜ್ ಜಯ ಗಳಿಸಿತು. ಪಂದ್ಯದ ಮೊದಲಾರ್ಧದಲ್ಲಿ ಅತಿಥೇಯ ಬಿಇಎಸ್ ಕಾಲೇಜ್ 14 (19-05) ಅಂಕಗಳ ಮುನ್ನಡೆ ಸಾಧಿಸಿತ್ತು. ಅನುಭವಿ ಆಟಗಾರ್ತಿಯರನ್ನು ಹೊಂದಿದ್ದ ಬಿಇಎಸ್, ಹಾನಗಲ್ಲನ ಕುಮಾರೇಶ್ವರ ಕಾಲೇಜು ತಂಡವನ್ನು ಸುಲಭವಾಗಿ ಮಣಿಸಿತು.

ಶಿಗ್ಗಾಂವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾವಿತ್ರಿ ಅತ್ಯುತ್ತಮ ರೈಡರ್, ಕುಮಾರೇಶ್ವರ ಕಾಲೇಜು ತಂಡದ ರೇಣುಕಾ ಅತ್ಯುತ್ತಮ ಡಿಫೆಂಡರ್ ಹಾಗೂ ಬಿಇಎಸ್ ಕಾಲೇಜಿನ ಆಟಗಾರ್ತಿ ಅರ್ಪಿತಾ ಆಲ್​ರೌಂಡರ್ ಪ್ರಶಸ್ತಿಗೆ ಭಾಜನರಾದರು.

ರೋಚಕ ಗೆಲುವು ಸಾಧಿಸಿದ ಜಿ.ಎಚ್. ಕಾಲೇಜ್: ಅಂತಿಮ ಪಂದ್ಯದಲ್ಲಿ ಹಾವೇರಿ ಜಿ.ಎಚ್. ಕಾಲೇಜ್ ಸರ್ಕಾರಿ ಪದವಿ ಕಾಲೇಜು ಗಾಂಧಿಪುರ ತಂಡವನ್ನು 7 (21-14) ಅಂಕಗಳ ಅಂತರದಿಂದ ಪುರುಷರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪಂದ್ಯದ ಮೊದಲಾರ್ಧದಲ್ಲಿ 2 ಅಂಕಗಳ ಹಿನ್ನಡೆ ಪಡೆದಿದ್ದ (06-08) ಜಿಎಚ್ ಕಾಲೇಜ್, ದ್ವಿತೀಯಾರ್ಧದಲ್ಲಿ ವಿರೋಚಿತ ಹೋರಾಟ ನಡೆಸಿತು. ತಂಡದ ಕುಮಾರ ಒಂದೇ ರೈಡ್​ನಲ್ಲಿ ಪಡೆದ 4 ಅಂಕಗಳು ಜಿಎಚ್ ಕಾಲೇಜ್ ಅನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿತು. ಬಿಇಎಸ್ ಕಾಲೇಜಿನ ದೊಡ್ಡಬಸವರಾಜ ಅತ್ಯುತ್ತಮ ರೈಡರ್, ಗಾಂಧಿಪುರದ ಸರ್ಕಾರಿ ಪದವಿ ಕಾಲೇಜಿನ ನದಾಫ್ ಡಿಫೆಂಡರ್, ಹಾಗೂ ಜಿಎಚ್ ಕಾಲೇಜಿನ ಕುಮಾರೇಶ ಸವೋತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ ಹಾಗೂ ನಿವೃತ್ತ ಪ್ರಾಚಾರ್ಯ ಕೆ.ಜಿ. ಖಂಡೇಬಾಗೂರ, ಉಪನ್ಯಾಸಕರಾದ ಡಾ. ಪ್ರೇಮಾನಂದ ಲಕ್ಕಣ್ಣನವರ ಇತರರು ವಿಜೇತ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net