

ಬ್ಯಾಡಗಿ: ಭಗತ್ಸಿಂಗ್ ಅವರಂಥ ಕ್ರಾಂತಿಕಾರಿ ಹೋರಾಟದೊಂದಿಗೆ ಲಕ್ಷಾಂತರ ಜನರ ತ್ಯಾಗದಿಂದ ಭಾರತ ಸ್ವಾತಂತ್ರ್ಯ ಪಡೆಯಿತು. ಈ ಮೂಲಕ ಬ್ರಿಟಿಷರ ಆಡಳಿತ ಕೊನೆಗೊಂಡಿತು ಎಂದು ಬಾಲವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಇಲ್ಲಿನ ಎಸ್ಜೆಜೆಎಂ ಕ್ರೀಡಾಂಗಣದಲ್ಲಿ ಭಗತ್ಸಿಂಗ್ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭಗತ್ಸಿಂಗ್ ಅವರ 117ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
18ನೇ ಶತಮಾನದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಹೋರಾಟಗಾರರಿಗೆ ಬ್ರಿಟಿಷರು ಹೊಸ ಕಾಯ್ದೆ ಜಾರಿಗೊಳಿಸಿ, ಪ್ರಾಂತೀಯ ರಾಜರಿಗೆ ತಮ್ಮ ಆಸ್ಥಾನ ಉಳಿಸಿಕೊಳ್ಳದಂತೆ ಷಡ್ಯಂತ್ರ ಹೂಡಿದರು. ಸುಭಾಸಚಂದ್ರ ಭೋಸ್, ಚಂದ್ರಶೇಖರ ಆಜಾದ್, ಭಗತ್ಸಿಂಗ್ ಅವರಂತಹ ನೂರಾರು ಕ್ರಾಂತಿಕಾರಿ ನಾಯಕರು ಹಚ್ಚಿದ ಹೋರಾಟದ ಕಿಚ್ಚಿನಿಂದ ಯುವಪೀಳಿಗೆ ಹೋರಾಟದಲ್ಲಿ ಧುಮುಕುವಂತಾಯಿತು ಎಂದರು.
ಭಾರತೀಯ ಸಂಸ್ಕೃತಿ, ಸಂಸ್ಕಾರ, ಇಲ್ಲಿನ ಅಧ್ಯಾತ್ಮ ವಿಶಿಷ್ಟವಾಗಿದೆ. ಇದರಿಂದಾಗಿ ಭಾರತ ವಿಶ್ವಗುರು ಸ್ಥಾನ ಪಡೆದಿದೆ. ಭಾರತೀಯ ಪರಂಪರೆ ಉಳಿಸಲು ಯುವಪೀಳಿಗೆ ಜಾಗೃತರಾಗಬೇಕಿದೆ. ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕಿ ಅರಿವು ಮೂಡಿಸಬೇಕು ಎಂದರು.
ಯುವ ಭಾಷಣಕಾರ ಅಮೋಘ ಭಾರತ ಮಾತನಾಡಿ, ಭಗತ್ಸಿಂಗ್ ಅವರ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ 1930ರ ದಶಕದಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಕಿಚ್ಚು ಮೂಡಿಸಿತು. ಕ್ರಾಂತಿಕಾರಿ ಹೋರಾಟದ ನಾಯಕ ಲಾಲಾ ಲಜಪತ್ರಾಯರ ಜತೆಗೆ ಭಗತ್ಸಿಂಗ್ ಸೇರಿಕೊಂಡು ಜನರಲ್ಲಿ ರಾಷ್ಟ್ರೀಯ ಭಾವನೆಗಳನ್ನು ಬಿತ್ತಿದರು. ದೇಶಕ್ಕಾಗಿ ಅರ್ಪಣಾ ಮನೋಭಾವದಿಂದ ಶ್ರಮಿಸಲು ಬೋಧಿಸಿದರು ಎಂದರು.
ಹರ್ಲಾಪುರ ಗ್ರಾಮದ ಯುವಕರು ಮಲ್ಲಕಂಬ ಪ್ರದರ್ಶನ ನೀಡಿದರು. ವೇದಿಕೆ ಬಳಿಯ ಶಿಬಿರದಲ್ಲಿ ಕೆಲವರು ರಕ್ತದಾನ ಮಾಡಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಲಿಂಗರಾಜ ಶಿವಣ್ಣನವರ, ಸ್ಥಾಯಿ ಸಮಿತಿ ಚೇರ್ವುನ್ ಚಂದ್ರಪ್ಪ ಶೆಟ್ಟರ, ಸದಸ್ಯ ಬಸವರಾಜ ಛತ್ರದ, ಶ್ರೀನಿವಾಸ ಕುರಕುಂದಿ, ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಶಂಕರ ರ್ಬಾ, ದುರ್ಗೆಶ ಗೋಣೆಮ್ಮನವರ, ವಿಷ್ಣುಕಾಂತ ಬೆನ್ನೂರು, ನಂದೀಶ ವೀರನಗೌಡ್ರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಇದ್ದರು.