

ಹೂವಿನಹಡಗಲಿ: ನಮ್ಮ ಭಾರತೀಯ ಹಬ್ಬ ಆಚರಣೆಗಳಲ್ಲಿ ವೈಜ್ಞಾನಿಕತೆ ಇದೆ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣ ಹೊರವಲಯ ಹಂಪಸಾಗರ ರಸ್ತೆಯಲ್ಲಿರುವ ದೊಡ್ಡಬಸವೇಶ್ವರ ಸ್ವಾಮಿ ಗದ್ದುಗೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಗಳಿಗೆ ಹೆಚ್ಚಿನ ಕೀಟಬಾಧೆ ಬಾಧಿಸುತ್ತದೆ.
ಈ ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ದೀಪಾರಾಧನೆ ಮಾಡುವುದರಿಂದ ಕೀಟಗಳ ಉಪಟಳ ತಪ್ಪುತ್ತದೆ. ನಮ್ಮ ಪೂರ್ವಜರು ಈ ದೃಷ್ಟಿಯಿಂದ ದೀಪೋತ್ಸವ ಆಚರಿಸುತ್ತ ಬಂದಿದ್ದಾರೆ ಎಂದರು.
ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ದೀಪೋತ್ಸವದಿಂದ ಮನುಷ್ಯರಲ್ಲಿನ ಅಂಧಕಾರ ತೊಲಗುತ್ತದೆ ಎಂದರು.
ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೊಡ್ಡಬಸವೇಶ್ವರ ಗದ್ದುಗೆ ಸೇವಾ ಸಮಿತಿ ಅಧ್ಯಕ್ಷ ಡಾ.ಜಂಬಣ್ಣ ಯಲಗಚ್ಚಿನ, ವಕೀಲ ಎಂ.ಎನ್.ಮಂಜುನಾಥ, ಸದಸ್ಯರಾದ ನಾಗೇಂದ್ರಯ್ಯ, ಟಿ.ದೇವಪುತ್ರಪ್ಪ, ಬಾಲಚಂದ್ರಪ್ಪ ಇತರರಿದ್ದರು.