

ಉಳ್ಳಾಲ/ಮಂಗಳೂರು: ಸಮಾಜದಲ್ಲಿ ನಮ್ಮ ಬದುಕು ನಮ್ಮ ಹಕ್ಕು, ಅದನ್ನು ಯಾರೂ ಕಲಿಸಬೇಕಿಲ್ಲ. ಆದರೆ ಇನ್ನೊಬ್ಬರಿಗೋಸ್ಕರ ಬದುಕೋದೇ ಶ್ರೇಷ್ಠ ಅನ್ನೋದನ್ನ ಬಾಲಸಂರಕ್ಷಣಾ ಕೇಂದ್ರ ಸಂಚಾಲಕ ಅನಂತಕೃಷ್ಣ ಕಲಿಸಿ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.
ರಾಜ್ಯ ಕಾರ್ಯಕಾರಿಣಿಯಲ್ಲಿ ನಗರಕ್ಕೆ ಆಗಮಿಸಿದ್ದ ಅವರು ತನ್ನ ಹುಟ್ಟುಹಬ್ಬವನ್ನು ಹೊರವಲಯದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಸರಳವಾಗಿ ಆಚರಿಸಿ ಮಾತನಾಡಿದರು. ಪಕ್ಷದ ಮುಖಂಡರ ಆಶಯದಂತೆ ಇಲ್ಲಿ ಹುಟ್ಟುಹಬ್ಬ ಆಚರಿಸಿದ್ದು ಬಹಳ ಸಂತಸ ತಂದಿದೆ ಎಂದರು.
ಬಾಲಸಂರಕ್ಷಣಾ ಕೇಂದ್ರ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗೋಪಾಲ್ ಕುತ್ತಾರ್, ಮುಖಂಡರಾದ ರಾಜೇಶ್ ಶೆಟ್ಟಿ ಪಜೀರುಗುತ್ತು, ಕಿಶೋರ್ ಕುಮಾರ್ ಪುತ್ತೂರು, ಪುರುಷೋತ್ತಮ ಕಲ್ಲಾಪು ಇನ್ನಿತರರು ಇದ್ದರು.
ಮಂಗಳಾದೇವಿಗೆ ಭೇಟಿ: ಜನ್ಮದಿನದ ನಿಮಿತ್ತ ಮೊದಲು ಮಂಗಳೂರಿನ ಶ್ರೀ ಮಂಗಳಾದೇವಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ತಂದೆ, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿರಿಯರಾದ ಭಾನುಪ್ರಕಾಶ್ ಸೇರಿದಂತೆ ಹಲವು ನಾಯಕರ ಹಾರೈಕೆ, ಆಶೀರ್ವಾದ ಪಡೆಯುವ ಸದವಕಾಶ ದೊರಕಿದೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಶಿರಾ, ಆರ್.ಆರ್.ನಗರ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವುದು ಪ್ರತಿಪಕ್ಷದವರಿಗೂ ಗೊತ್ತಿದೆ, ಶಿರಾ ಕ್ಷೇತ್ರದಲ್ಲಿ ಕನಿಷ್ಠ 25,000 ಮತಗಳ ಅಂತರದಲ್ಲಿ ಜಯ ಗಳಿಸಲಿದ್ದೇವೆ. - ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ