

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಕಾಳಮ್ಮ ಮಲ್ಲೇಶಯ್ಯ ಟ್ರಸ್ಟ್ ವತಿಯಿಂದ ಶುಕ್ರವಾರ ಸೋಂಪುರ ವರಹಸಂದ್ರದಲ್ಲಿ ಉಚಿತ ಆರೋಗ್ಯ ಚಿಕಿತ್ಸಾಲಯ ಆರಂಭಿಸಲಾಗಿದೆ.
ಈ ಆರೋಗ್ಯ ಚಿಕಿತ್ಸಾಲಯದಲ್ಲಿ ಪ್ರತಿನಿತ್ಯ ಬೆಳಗ್ಗೆ 9ರಿಂದ 11 ಗಂಟೆವರೆಗೆ ಉಚಿತ ಆರೋಗ್ಯ ಪರೀಕ್ಷೆ ನಡೆಯಲಿವೆ.
ರಾಮನಗರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ವಿಜೇಯಂದ್ರ ಅವರು ರಾಜ್ಯಾದ್ಯಂತ ಉಚಿತ ಔಷಧ ಹಂಚಿದ್ದರು. ಅವರು ಕೈಗೊಂಡಿರುವ ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ನಿರಂತರವಾಗಿ ಆರೋಗ್ಯ ಪರೀಕ್ಷೆಗಳು ನಡೆಯಲಿವೆ. ಅಲ್ಲದೆ, ಬಡವರಿಗೆ ಕುಡಿಯುವ ನೀರಿನ 500 ಕ್ಯಾನ್ ಹಾಗೂ ಮಾಸ್ಕ್ಗಳನ್ನು ಉಚಿತವಾಗಿ ನೀಡಲಾಯಿತು. ಉಚಿತ ಕೋವಿಡ್ ಪರೀಕ್ಷೆ ಆಯೋಜಿಸಲಾಗಿದೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಾಜಿ ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್, ಹೆಮ್ಮೀಗೆಪುರ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸಂಜೀವ್ ಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಪ್ಪಲತಾ ಪರಮಶಿವಯ್ಯ ಮತ್ತಿತರರಿದ್ದರು.