ಅಧಿಕಾರಿಗಳಿಂದಲೇ ಕನ್ನಡ ಕಗ್ಗೊಲೆ!

0
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.7ರ ನಾಮಫಲಕದಲ್ಲಿ ಕನ್ನಡ ಪದ ತಪ್ಪಾಗಿ ಬರೆದಿರುವುದು.
Published on

ಸರ್ಕಾರಿ ಕಚೇರಿಗಳ ಮೇಲೆ ತಪ್ಪು ಬರಹ ನಾಮಫಲಕಗಳಲ್ಲಿ ಮಾತೃಭಾಷೆಗೆ ಅವಮಾನ
ಪ್ರಶಾಂತ ಹೂಗಾರ ಬೆಳಗಾವಿ
ಕನ್ನಡ ನಾಡು-ನುಡಿ ಕುರಿತು ಭಾಷಾಭಿಮಾನ ಹೊಂದಿರುವ ಜತೆಗೆ ಇತರರಿಗೆ ಕನ್ನಡ ಭಾಷೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಾದ ಅಧಿಕಾರಿಗಳು ಸರ್ಕಾರದ ಇಲಾಖೆ ನಾಮಲಕಗಳಲ್ಲಿ ಕನ್ನಡ ಭಾಷೆಯ ಪದಗಳನ್ನು ಸರಿಯಾಗಿ ಬಳಕೆ ಮಾಡದೆ ಇರುವುದು ದುರದೃಷ್ಟದ ಸಂಗತಿಯಾಗಿದ್ದು, ಕನ್ನಡ ಭಾಷೆ ಉಳಿಸಿ, ಬೆಳೆಸಬೇಕಾದ ಅಧಿಕಾರಿಗಳಿಂದಲೇ ಕನ್ನಡದ ಕಗ್ಗೊಲೆಯಾಗುತ್ತಿದೆ.

ಹೇಳೋದು ವೇದಾಂತ ತಿನ್ನೋದು ಬದನೆಕಾಯಿ ಎನ್ನುವ ಗಾದೆ ಮಾತು ಗಡಿ ಜಿಲ್ಲೆಯ ಅಧಿಕಾರಿಗಳಿಗೆ ಹೇಳಿ ಮಾಡಿಸಿದಂತಿದೆ. ಕನ್ನಡ ರಾಜ್ಯೋತ್ಸವ (ಸಂಭ್ರಮ) ಆಚರಣೆಯಲ್ಲಿ ಗಂಟೆಗಟ್ಟಲೇ ಕನ್ನಡ ನಾಡು-ನುಡಿ ಬಗ್ಗೆ ಭಾಷಣ ಬಿಗಿಯುವ ಅಧಿಕಾರಿಗಳು ಸರ್ಕಾರದ ಇಲಾಖೆ ನಾಮಲಕಗಳಲ್ಲಿ ಕನ್ನಡ ಪದ ಬಳಕೆ ಸರಿಯಾಗಿ ಅಳವಡಿಸಿಕೊಳ್ಳದೆ ಇರುವುದು ಭಾಷೆಗೆ ಮಾಡುವ ಅವಮಾನದಂತಿದೆ. ಅದ್ದೂರಿ ರಾಜ್ಯೋತ್ಸವಕ್ಕೆ ಹೆಸರಾಗಿರುವ ಬೆಳಗಾವಿ ಹಾಗೂ ಇಲ್ಲಿನ ಕನ್ನಡಾಭಿಮಾನಿಗಳಿಗೆ ಜಿಲ್ಲೆಯ ಅಧಿಕಾರಿಗಳ ನಡೆಯಿಂದ ಮುಜುಗರ ಉಂಟಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಮಫಲಕದಲ್ಲಿ ಕನ್ನಡ ಪದಪ್ರಯೋಗ ಸರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಉತ್ತಿ-ಬಿತ್ತುವ ಕೆಲಸ ಮಾಡುತ್ತಾರೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.

ಬಹುತೇಕ ಕಡೆ ಕಡೆಗಣನೆ

ಬೆಳಗಾವಿ ನಗರದಲ್ಲಿರುವ ಬಹುತೇಕ ಸರ್ಕಾರಿ ಇಲಾಖೆಗಳ ನಾಮಫಲಕಗಳಲ್ಲಿ ಕನ್ನಡ ಪದಗಳನ್ನು ತಪ್ಪುತಪ್ಪಾಗಿ ಬರೆಯಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಕಚೇರಿ, ಮುನ್ಸಿಪಲ್ ನೌಕರರ ಪಿಂಚಣಿ ಪ್ರಾಧಿಕಾರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮ ನಿಯಮಿತ ನಿರ್ದೇಶಕರ ಕಚೇರಿ ಹಾಗೂ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕಾದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಸೇರಿ ಜಿಲ್ಲೆಯ ಇತರ ಆಡಳಿತ ಕಚೇರಿಗಳ ನಾಮಲಕಗಳಲ್ಲಿ ಕನ್ನಡ ಭಾಷೆಯ ನಿರ್ಲಕ್ಷೃ ಮಾಡಿರುವುದು ಕಾಣಸಿಗುತ್ತವೆ.

ಗಂಭೀರವಾಗಿ ಪರಿಗಣಿಸಲು ಆಗ್ರಹ

ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಈಗಾಗಲೇ ಕನ್ನಡ ನಾಮಲಕ ಅಳವಡಿಸುವಂತೆ ಕನ್ನಡಪರ ಸಂಘಟನೆಗಳಿಂದ ಆಗ್ರಹ ಕೇಳಿಬರುತ್ತಿದೆ. ಜಿಲ್ಲೆಯ ಮೂಡಲಗಿ, ಬೈಲಹೊಂಗಲ, ಗೋಕಾಕ, ಖಾನಾಪುರ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ರಾಯಬಾಗ, ಕುಡಚಿ, ಹುಕ್ಕೇರಿ ತಾಲೂಕಿನಲ್ಲಿ ಸರ್ಕಾರಿ ಕಚೇರಿ ಹಾಗೂ ಅಂಗಡಿಗಳ ನಾಮಲಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬರುತ್ತಿದೆ. ಹೀಗಿದ್ದರೂ ಆಡಳಿತ ಭಾಷೆಯಾಗಿರುವ ಕನ್ನಡ ಬಳಕೆ ಗಂಭೀರವಾಗಿ ಪರಿಗಣಿಸದೆ ಆಡಳಿತ ಮತ್ತು ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳಿಗೇ ಬೋಧನೆ ಮಾಡಬೇಕು

ಕಚೇರಿ, ಅಂಗಡಿ, ಗಲ್ಲಿ ಹಾಗೂ ದಾಖಲೆಗಳಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ಬಳಕೆ ಮಾಡುವಂತೆ ದಶಕಗಳಿಂದಲೂ ಕನ್ನಡ ಹೋರಾಟಗಾರರು ಪ್ರತಿಭಟನೆ, ಮನವಿ ನೀಡುತ್ತಲೇ ಇದ್ದಾರೆ. ಗಡಿನಾಡು ಬೆಳಗಾವಿಯಲ್ಲಿ ಅಳಿವಿನಂಚಿನಲ್ಲಿರುವ ಕನ್ನಡ ಭಾಷೆಯನ್ನು ಉತ್ತಿ-ಬಿತ್ತುವ ಕೆಲಸ ಮಾಡಬೇಕಾದ ಜಿಲ್ಲೆಯ ಅಧಿಕಾರಿಗಳಿಂದಲೇ ಕನ್ನಡ ಬಳಕೆ ಕಡೆಗಣನೆ ಆಗುತ್ತಿರುವುದು ವಿಪರ್ಯಾಸ. ಕನ್ನಡ ಭಾಷೆಯಲ್ಲಿ ನಿರ್ಲಕ್ಷೃ ಧೋರಣೆ ತೋರುತ್ತಿರುವ ಅಧಿಕಾರಿಗಳ ಕಿವಿ ಹಿಂಡುವ ಮೂಲಕ ಸರ್ಕಾರ ಕನ್ನಡ ಪಾಠವನ್ನು ಬೋಧಿಸಬೇಕಾದ ಅನಿವಾರ್ಯತೆ ಇದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯ ನಾಮಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಕೆಯಾಗಬೇಕು ಎಂಬ ಕಾನೂನು ಇದೆ. ಆದರೆ, ಕನ್ನಡ ಭಾಷೆಯ ಮೇಲೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕುಂದಾನಗರಿಯಲ್ಲಿ ಮಾತೃಭಾಷೆ ಬಳಕೆ ಕಡೆಗಣನೆ ಮಾಡಲಾಗುತ್ತಿದೆ. ಕನ್ನಡ ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಅಧಿಕಾರಿಗಳಿಂದಲೇ ಕನ್ನಡ ಕಗ್ಗೊಲೆಯಾಗುತ್ತಿರುವುದು ವಿಪರ್ಯಾಸ.ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ ಸರ್ಕಾರಿ ಇಲಾಖೆಯ ನಾಮಲಕಗಳಲ್ಲಿ ಕನ್ನಡ ಅಕ್ಷರದೋಷವಿದ್ದ ಇಲಾಖೆ ಅಧಿಕಾರಿ ಜತೆ ಮಾತನಾಡಲಾಗುವುದು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಗಮನಕ್ಕೆ ತಂದು ಇಲಾಖೆಗಳ ನಾಮಫಲಕಗಳಲ್ಲಿ ತಪ್ಪಾಗಿ ಕನ್ನಡ ಪದ ಬಳಕೆ ಮಾಡಿರುವ ಇಲಾಖೆಗಳಿಗೆ ಅವರಿಂದಲೇ ನೋಟಿಸ್ ನೀಡಿ, ಶೀಘ್ರ ಸರಿಪಡಿಸುವ ಕೆಲಸ ಮಾಡಲಾಗುವುದು.ವಿದ್ಯಾವತಿ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net