8ರೊಳಗೆ ಕಾಲುವೆ ದುರಸ್ತಿಗೊಳಿಸಿ ನೀರು ಹರಿಸಿ

Veerasangayya
ಜೆ.ಎಂ.ವೀರಸಂಗಯ್ಯ.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಜಲಾಶಯ ತುಂಬಿದ್ದು, ಹೆಚ್ಚುವರಿ ನೀರು ಕ್ರಸ್ಟ್‌ಗೇಟ್‌ಗಳ ಮೂಲಕ ಹಗರಿಹಳ್ಳಕ್ಕೆ ಬಿಡಲಾಗುತ್ತಿದೆ. ಕೂಡಲೇ ಗೇಟ್ ಬಂದ್ ಮಾಡಿ, ಎಡ ಮತ್ತು ಬಲ ಕಾಲುವೆಗಳನ್ನು ಸ್ವಚ್ಛಗೊಳಿಸಿ ಅವುಗಳ ಮೂಲಕ ಕೆರೆಗಳಿಗೆ ನೀರು ಹರಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಜಲಾಶಯದ ಒಂದು ಗೇಟಿನಿಂದ ಹಗರಿಹಳ್ಳಕ್ಕೆ ನೀರು ಬಿಟ್ಟಿದ್ದು, ನಂತರ ಆ ನೀರು ತುಂಗಭದ್ರಾ ಜಲಾಶಯ ಸೇರಲಿದೆ. ಜಲಾಶಯ ಭರ್ತಿಯಾಗಿರುವ ಕಾರಣ ವ್ಯರ್ಥವಾಗಿ ಹರಿದು ಹೋಗಲಿದೆ. ಈ ಕುರಿತು ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ ಎಂದ ಅವರು, ಮಾಲವಿ ಜಲಾಶಯದ ಎಡ ಮತ್ತು ಬಲದಂಡೆಯ ಕಾಲುವೆಗಳನ್ನು ತಕ್ಷಣ ಸ್ವಚ್ಛತೆಗೊಳಿಸಿದರೆ, ಬ್ಯಾಲಾಳ್ ಕೆರೆ ತುಂಬಿಸಬಹುದು. ಸಾಧ್ಯವಾದರೆ ಚಿಂತ್ರಪಳ್ಳಿ ಕೆರೆಗೂ ನೀರು ಹರಿಸಬಹುದು. ಇದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದು. ಆದ್ದರಿಂದ ನ.8ರೊಳಗೆ ಕಾಲುವೆ ದುರಸ್ತಿಗೊಳಿಸಬೇಕು. ನಿರ್ಲಕ್ಷಿಸಿದರೆ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಬಿ.ಸಿದ್ದನಗೌಡ, ತಾಲೂಕು ಅಧ್ಯಕ್ಷ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ರವಿ ತಂಬ್ರಹಳ್ಳಿ, ಮಾಬುಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net