ವಿಜಯವಾಣಿ ಸುದ್ದಿಜಾಲ ಲಿಂಗಸುಗೂರು
ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಪುರ ಅವರು ಬಿಜೆಪಿ ಶಾಸಕ ಮಾನಪ್ಪ ವಜ್ಜಲರ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಿಂದ ಆಯ್ಕೆಗೊಂಡ ಎಂಎಲ್‌ಸಿ ಶರಣಗೌಡರು ವಿವಿಧ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾಗುವ ಜತೆಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಅವರನ್ನು ಸೋಲಿಸಲು ಆರ್.ರುದ್ರಯ್ಯ ಅವರನ್ನು ಕರೆತಂದು ಪಕ್ಷದಲ್ಲಿ ಗೊಂದಲ ಸೃಷ್ಟಿಸಿ ಪರೋಕ್ಷವಾಗಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧೆಗಿಳಿಸಿ ಡಿ.ಎಸ್.ಹೂಲಗೇರಿ ಸೋಲಿಗೆ ಕಾರಣರಾಗಿರುವುದು ಕ್ಷೇತ್ರದ ಜನತೆಗೆ ತಿಳಿದ ವಿಷಯವಾಗಿದೆ.
ಲಿಂಗಸುಗೂರು ಪುರಸಭೆ, ಹಟ್ಟಿ ಪಪಂ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಜತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಸರ್ಕಾರ ಪಕ್ಷ ನಿಷ್ಠರಿಗೆ ವಿವಿಧ ಸ್ಥಾನಗಳಿಗೆ ನಾಮನಿರ್ದೇಶನ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಕ ಮಾಡಿದೆ. ಆದರೆ ಶರಣಗೌಡರು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ನಾನು ಮೂಲತಃ ಕಾಂಗ್ರೆಸ್ ಪಕ್ಷದಿಂದ ಬಂದಿದ್ದು, ಸಾಮಾಜಿಕ ನ್ಯಾಯದಡಿ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರು ನನ್ನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ಹಿಂದುಳಿದ ವರ್ಗದ ವ್ಯಕ್ತಿಗೆ ಇಂತಹ ಸ್ಥಾನ ನೀಡಿರುವುದು ಅವರಿಗೆ ಸಹಿಸಲಾಗುತ್ತಿಲ್ಲ ಎಂದರು. ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಪ್ರಮುಖರಾದ ಎಚ್.ಮುದುಕಪ್ಪ ವಕೀಲ, ಎಂ.ಡಿ.ರಫೀ, ರುದ್ರಪ್ಪ ಬ್ಯಾಗಿ, ಸಂಜೀವಕುಮಾರ ಕಂದಗಲ್, ಜೀವನ್ ಬಾಳೇಗೌಡ, ಸಂಜೀವಪ್ಪ ಹುನಕುಂಟಿ, ಯಮನಪ್ಪ ದೇಗುಲಮಡಿ ಇತರರಿದ್ದರು.