

ಇಳಕಲ್ಲ(ಗ್ರಾ): ಯಾಂತ್ರಿಕ ಯುಗದಲ್ಲಿ ಮನುಷ್ಯನಿಗೆ ಶಾಂತಿ, ಸಮಾಧಾನ ದೊರೆಯಬೇಕಾದರೆ ಪುರಾಣ, ಪುಣ್ಯಕತೆ, ಪ್ರವಚನ ಆಲಿಸಬೇಕೆಂದು ನಂದವಾಡಗಿ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.
ಗ್ರಾಮದ ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ವತಿಯಿಂದ ರುದ್ರುಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಮಹಾದಾಸೋಹಿ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಾವಣ ಸರ್ವರ ಬಾಳಲ್ಲಿ ಸೊಬಗು ತರಲಿ ಆಧ್ಯಾತ್ಮದತ್ತ ಚಿತ್ತ ಹರಿಯಲಿ ಎಂದು ಕನಕಗಿರಿ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಶ್ರಿ ಶರಣಬಸವೇಸ್ವರರ ಚರಿತಾಮೃತ ನೀಡುತ್ತಿದ್ದಾರೆ. ಮನುಷ್ಯನಿಗೆ ನೆಮ್ಮದಿ ನೀಡುವುದೇ ಪ್ರವಚನ ಎಂದು ತಿಳಿಸಿದರು.
ಡಾ. ಚನ್ನಮಲ್ಲ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನದಲ್ಲಿ ನಡೆ-ನುಡಿ, ಆಚಾರ-ವಿಚಾರ, ಸಂಸ್ಕಾರ, ಅಧ್ಯಾತ್ಮ, ಜ್ಞಾನ ಕಲಿಸುವುದು. ಜೀವನದ ಯಶಸ್ಸಿಗೆ ಬೇಕಾದ ಎಲ್ಲ ತತ್ವಾದರ್ಶಗಳನ್ನು ತಿಳಿಸುವ ಜತೆಗೆ ಸಮಾನತೆ, ಸ್ವಾವಲಂಬನೆ, ಸತ್ಸಂಗ ಹಾಗೂ ಕಾಯಕದ ಮಹತ್ವಗಳ ಅರಿವು ಮೂಡಿಸುತ್ತದೆ. ಸದಾ ಶಿವನ ಒಲುಮೆಗೆ ವಿನಯ ಬೇಕು. ಬಾಗಿದ ತಲೆ, ಮುಗಿದ ಕೈಯಾಗಿರಿಸಿಕೊಂಡು ಗುರುವಿಗೆ ಶರಣಾಗಬೇಕು ಎಂಬುದು ಪುರಾಣದ ತಿರುಳು ಎಂದರು.
ಪ್ರವಚನಕಾರ ಡಾ. ಶಾಂತವೀರ ಶಿವಾಚಾರ್ಯರು ಮಾತನಾಡಿದರು. ಗ್ರಾಮದ ಪ್ರಗತಿಪರ ರೈತ ಚನ್ನಪ್ಪಗೌಡ ನಾಡಗೌಡ್ರ ಉಪಸ್ಥಿತರಿದ್ದರು.