

ಅಥಣಿ: ಚಿಕ್ಕಮಗಳೂರಿನಲ್ಲಿ ನಡೆದ ನ್ಯಾಯವಾದಿ ಪ್ರೀತಂ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಅಥಣಿ ನ್ಯಾಯವಾದಿಗಳ ಸಂಘದಿಂದ ರಸ್ತೆ ಸಂಚಾರ ತಡೆದು ಪ್ರತಿಭಟಿಸಿ, ತಹಸೀಲ್ದಾರ್ ವಾಣಿ ಯು. ಅವರಿಗೆ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ತಾಲೂಕಾಧ್ಯಕ್ಷ ಎ.ಎಸ್.ಹುಚಗೌಡರ ಮಾತನಾಡಿ, ಯುವ ವಕೀಲ ಪ್ರೀತಂ ಹಲ್ಲೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. 14 ಜನ ನ್ಯಾಯವಾದಿಗಳ ಮೇಲೆ ಅನವಶ್ಯಕವಾಗಿ ಎ್ಐಆರ್ ದಾಖಲಿಸಿರುವುದನ್ನು ರದ್ದು ಮಾಡಬೇಕು. ವಕೀಲರಿಗೆ ಅವಮಾನ ಆಗುವ ಹಾಗೆ ಮಾತನಾಡಿರುವ ಪೊಲೀಸ್ ಪೇದೆಗಳನ್ನು ಶಾಶ್ವತವಾಗಿ ಅಮಾನತಗೊಳಿಸಬೇಕು. ಪ್ರಕರಣವನ್ನು ಹೈಕೋರ್ಟ್ ನಿವತ್ತ ನ್ಯಾಯಮೂರ್ತಿಗಳಿಂದ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ಸಿದ್ದಾರೂಡ ಸವದಿ ಮಾತನಾಡಿ, ಅಧಿವೇಶನದಲ್ಲಿ ನ್ಯಾಯವಾದಿಗಳ ಹಿತರಕ್ಷಣೆ ಕಾಯ್ದೆ ಜಾರಿಗೆ ತರಬೇಕು. ವಕೀಲರಿಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಗತಿಯೇನು. ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಶಿವಯೋಗಿ ವೃತ್ತದಲ್ಲಿ ಹೆಚ್ಚು ಕಾಲ ವಿಜಯಪುರ-ಜೇವರ್ಗಿ ಮತ್ತು ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ತಡೆದು, ಟಯರ್ ಸುಟ್ಟು ಆಕ್ರೋಶ ಹೊರಹಾಕಿದರು. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಪೊಲೀಸರು ಹರಸಾಹಸ ಪಟ್ಟು ರಸ್ತೆ ಸಂಚಾರ ಸುಗಮಗೊಳಿಸಿದರು.
ವಕೀಲರಾದ ಕೆ.ಎ.ವಣಜೋಳ, ಪಿ.ಜಿ.ಬಿಸಗುಪ್ಪಿ, ಬಿ.ಬಿ.ಬಿಸಲಾಪುರ, ಎಸ್.ಸಿ.ನಾಯಿಕ, ಸಂಘದ ಉಪಾಧ್ಯಕ್ಷ ಎಂ.ಸಿ.ದುಂಡಿ, ಕಾರ್ಯದರ್ಶಿ ಎಂ.ಎ.ಪಟ್ಟಣ, ಎಸ್.ಎನ್.ಕೊಟೂರಮಠ, ಯು.ಕೆ.ಕಟಾವಿ, ಬಿ.ಆರ್.ಮುಗ್ಗನವರ, ಸುನೀಲ ಸಂಕ, ಪಿ.ಎಸ್.ಡೊಕೆ, ಎಲ್.ಎಸ್.ಮಾಂಗ, ಪಿ.ಎಂ.ಕಾಂಬಳೆ, ಬಾಬಾಸಾಹೇಬ ಕಾಂಬಳೆ, ಎಸ್.ಎಸ್.ಪಾಟೀಲ ಇತರರಿದ್ದರು.