ಇಷ್ಟಲಿಂಗ ಪೂಜೆಯಿಂದ ಅನಿಷ್ಟಗಳು ದೂರ

RAMBHAPURI (2)
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.
Published on

ಬಾಳೆಹೊನ್ನೂರು: ಶ್ರಾವಣ ಮಾಸ ಹಿಂದುಗಳಿಗೆ, ವಿಶೇಷವಾಗಿ ವೀರಶೈವರಿಗೆ ಪವಿತ್ರ ಮಾಸ. ಶಿವಪೂಜೆ, ಪುಣ್ಯಕ್ಷೇತ್ರಗಳ ದರ್ಶನದಿಂದ ಜೀವನ ಆನಂದಮಯವಾಗುತ್ತದೆ. ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಅನಿಷ್ಟಗಳು ದೂರವಾಗುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಭಾನುವಾರ ರಂಭಾಪುರಿ ಪೀಠದಲ್ಲಿ ಶಾವಣ ಮಾಸದ ನಿಮಿತ್ತ ಆಯೋಜಿಸಿದ್ದ 32ನೇ ವರ್ಷದ ಇಷ್ಟಲಿಂಗ ಮಹಾಪೂಜೆಯ 11 ನೇ ದಿನದ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಏಕಾಂತದಲ್ಲಿ ಮಾಡುತ್ತಿದ್ದ ಇಷ್ಟಲಿಂಗ ಪೂಜೆಯನ್ನು ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಲೋಕಾಂತಗೊಳಿಸಿದರು. ಭಕ್ತರ ಮಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ತಲುಪಿಸಿದರು. ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಅನಿಷ್ಟಗಳು ದೂರಾಗುತ್ತವೆ. ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ವೀರಶೈವ ಲಿಂಗಾಯತರು ಲಿಂಗಭೇದ ಇಲ್ಲದೆ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಧರ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಆಧುನಿಕತೆ, ಇತರ ಮತ ಪ್ರಭಾವಗಳಿಂದ ಇಂದಿನ ಪೀಳಿಗೆ ವೀರಶೈವ ಧರ್ಮ, ಆಚಾರ, ವಿಚಾರಗಳನ್ನು ಮರೆತು ನಡೆಯುತ್ತಿದೆ. ಈ ಬದಲಾವಣೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿವಾಚಾರ್ಯರು ಸಮಾಜದಲ್ಲಿ ವೀರಶೈವ ಧರ್ಮ, ಸಂಸ್ಕಾರ ಬೆಳೆದು ಬರಲು ಶ್ರಮಿಸಬೇಕು. ಪರಮಾಚಾರ್ಯರ ಆಜ್ಞೆಯಂತೆ ಆಚಾರವಂತರಾಗಿ, ಸಂಸ್ಕಾರವಂತರಾಗಿ ಸಮಾಜಕ್ಕೆ, ಭಕ್ತ ಸಮುದಾಯಕ್ಕೆ ಧರ್ಮ ಮಾರ್ಗದ ಬೋಧನೆ ಮಾಡಬೇಕೆಂದು ತಿಳಿಸಿದರು.
32 ವರ್ಷಗಳಿಂದ ರಂಭಾಪುರಿ ಪೀಠದಲ್ಲಿ ಪ್ರತಿ ಶ್ರಾವಣ ಮಾಸದಲ್ಲಿ ಕ್ಷೇತ್ರದಲ್ಲಿಯೇ ಇದ್ದು ಇಷ್ಟಲಿಂಗ ಮಹಾಪೂಜೆ ನೆರವೇರಿಸುತ್ತ ಹಿಂದಿನ ಜಗದ್ಗುರುಗಳ ಪರಂಪರೆ ಪಾಲಿಸಲಾಗುತ್ತಿದೆ. ಪೀಠದ ಅಭಿವೃದ್ಧಿ ಮತ್ತು ವೀರಶೈವ ಧರ್ಮ, ಪರಮಾಚಾರ್ಯರ ನೀತಿ ಬೋಧನೆಗಳನ್ನು ನಾಡಿನಾದ್ಯಂತ ಬಿಡುವಿಲ್ಲದೆ ಸಂಚರಿಸಿ, ಧರ್ಮ ಸಂವರ್ಧನೆ ಮಾಡಲಾಗುತ್ತಿದೆ ಎಂದು ಹೇಳಿದರು.
ರಂಭಾಪುರಿ ಪೀಠವನ್ನು ಅಭಿವೃದ್ಧಿಪಡಿಸಿ ಭಕ್ತಿಯ ಪುಣ್ಯಕ್ಷೇತ್ರದ ಜತೆಗೆ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುತ್ತಿದೆ. ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ಬೃಹತ್ ಶಿಲಾ ಮೂರ್ತಿ ಸ್ಥಾಪಿಸಲಾಗುತ್ತಿದೆ. ಅಂದಾಜು 12 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಬಿಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಬಿಡುಗಡೆ ಆಗಿದ್ದು, ಉಳಿದ ಅನುದಾನ ನೀಡಲು ಮನವಿ ಸಲ್ಲಿಸಲಾಗಿದ್ದು ವಿಳಂಬವಾಗಿದೆ. ಯೋಜನೆ ಪೂರ್ಣಗೊಳಿಸಲು ಉಳಿದ 7 ಕೋಟಿ ಹಣ ಭಕ್ತರು, ದಾನಿಗಳಿಂದ ಸಂಗ್ರಹಿಸಬೇಕಿದೆ. ಭಕ್ತರ ಸೇವೆಗೆ ಅವಕಾಶ ಮಾಡಿದ್ದು, ಶಿಲಾ ಮಂಗಲಮೂರ್ತಿ ಸ್ಥಾಪನೆಗೆ 1.11 ಲಕ್ಷರೂ. ದೇಣಿಗೆ ನೀಡಿದವರಿಗೆ ಬೆಳ್ಳಿ ತಂಬಿಗೆಯಲ್ಲಿ ರೇಣುಕ ಮೂರ್ತಿಗೆ ಕ್ಷೀರಾಭಿಷೇಕ ಮಾಡಿಸಿ, ಅದೇ ತಂಬಿಗೆಯನ್ನು ಆಶೀರ್ವಾದವಾಗಿ ಅವರಿಗೆ ನೀಡಲಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಕಲಬುರಗಿ ಜಿಲ್ಲೆ ಮಾದನಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಧಾರವಾಡ ವೀರಶೈವ ಜಂಗಮ ಸಂಸ್ಥೆ ಅಧ್ಯಕ್ಷ ಡಾ. ಎಸ್.ಎಂ.ಹಿರೇಮಠ, ವೀರಶೈವ ಜಂಗಮ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು, ಚಿಕ್ಕಮಗಳೂರು ತಾಲೂಕ ವೀರಶೈವ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ, ಹಿರೆಕೊಳಲೆ ಉಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net