ಅ.24ರಂದು ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆ

council
Published on



ಮಂಗಳೂರು : ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಉಪಚುನಾವಣೆೆಯ ಮತಗಳ ಎಣಿಕೆ ಅ.24ರಂದು ನಡೆಯಲಿದೆ. ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ.
ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತ ಎಣಿಕೆಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು , 12 ಮೇಜುಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು ಡಿ ಗ್ರೂಪ್ ಸಿಬ್ಬಂದಿ ನೇಮಿಸಲಾಗಿದೆ. ಒಟ್ಟು 392 ಮತ ಪೆಟ್ಟಿಗೆಗಳನ್ನು ಪ್ರತಿ ಟೇಬಲ್‌ಗೆ 33ರಂತೆ ಹಂಚಿಕೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಿ ಬಳಿಕ ಒಂದನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಗುತ್ತದೆ. ನಿಗದಿತ ಕೋಟವನ್ನು ಮೊದಲ ಪ್ರಾಶಸ್ತ್ಯದಲ್ಲಿ ಪಡೆದ ಅಭ್ಯರ್ಥಿಯ ಆಯ್ಕೆ ಘೋಷಿಸಲಾಗುವುದು. ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟವಾಗಲಿದೆ. ಅ.21ರಂದು ನಡೆದ ಚುನಾವಣೆಯಲ್ಲಿ 5,906 (ಶೇ.97.91)ಮಂದಿ ಮತ ಚಲಾಯಿಸಿದ್ದರು.
* ಕಣದಲ್ಲಿ 4 ಮಂದಿ
ದ.ಕ.ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದ್ವಿಸದಸ್ಯ ಕ್ಷೇತ್ರವಾಗಿದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಈಗ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆದಿದೆ. ಬಿಜೆಪಿಯಿಂದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್‌ನಿಂದ ಉಡುಪಿ ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ , ಎಸ್‌ಡಿಪಿಐಯಿಂದ ಅನ್ವರ್ ಸಾದತ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ್ ಕಣದಲ್ಲಿದ್ದಾರೆ.
* ಬಿಜೆಪಿಗೆ ಗೆಲುವಿನ ವಿಶ್ವಾಸ
2021ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ (3672 ಮತ) ಮತ್ತು ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ (2079)ಪ್ರಥಮ ಪ್ರಾಶಸ್ತ್ಯದ ಮತದಲ್ಲೇ ಗೆಲುವು ಸಾಧಿಸಿದ್ದರು. ಎಸ್‌ಡಿಪಿಐಯ ಶಾಫಿ ಕೆ.ಬೆಳ್ಳಾರೆ 204 ಮತ ಪಡೆದಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸದಸ್ಯರ ಈಗಿನ ಬಲಾಬಲ ಪರಿಗಣಿಸಿದರೆ ಬಿಜೆಪಿ ಸುಮಾರು 1600 ಮತ ಹೆಚ್ಚು ಹೊಂದಿದ್ದು ಗೆಲುವಿನ ವಿಶ್ವಾಸದಲ್ಲಿದೆ. ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಸಂಖ್ಯಾ ಬಲ ಕಡಿಮೆ ಇರುವ ಕಾರಣ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿಲ್ಲ. ಆದಾಗ್ಯೂ ರಾಜ್ಯ ಸರ್ಕಾರದ ಬಲ ಇರುವ ಕಾರಣ ಗೆಲುವು ಸಾಧ್ಯವಾಗಬಹುದೆಂದು ಕಾಂಗ್ರೆಸ್ ನಾಯಕರು ನಿರೀಕ್ಷಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net