

ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆ ಎಲ್ಲ ಮತಯಂತ್ರಗಳನ್ನು ಹಲಗೆವಡೇರಹಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಮಸ್ಟರಿಂಗ್ ಕೇಂದ್ರದಲ್ಲಿ ಇಡಲಾಗಿದ್ದು, ಇದಕ್ಕೆ 3 ಸುತ್ತಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು ಉಪಚುನಾವಣೆ ಕಾರ್ಯ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಕ್ಕೆ ಅಂತ್ಯಗೊಂಡಿದೆ. ಆದರೆ, ಎಲ್ಲ ಮತಯಂತ್ರಗಳನ್ನು ವ್ಯವಸ್ಥಿತವಾಗಿ ಮಸ್ಟರಿಂಗ್ ಕೇಂದ್ರದಲ್ಲಿ ಭದ್ರವಾಗಿಡುವ ಕಾರ್ಯ ಬುಧವಾರ ಬೆಳಗ್ಗೆ 5 ಗಂಟೆವರೆಗೂ ನಡೆದಿದೆ. ಎಲ್ಲದಕ್ಕೂ ಸಿಸಿ ಕ್ಯಾಮೆರಾ ನಿಗಾ ವಹಿಸಲಾಗಿದ್ದು, ಮೂರು ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸ್ಟ್ರಾಂಗ್ ರೂಂ ಬಳಿ ಶಾಲೆ ಒಳಭಾಗದಲ್ಲಿ ಕೇಂದ್ರದ ಪ್ಯಾರಾ ಮಿಲಿಟರಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಾಲಾ ಆವರಣ ಮತ್ತು ಹೊರ ಭಾಗದಲ್ಲಿ ರಾಜ್ಯದ ಪೊಲೀಸ್ ಪಡೆಯಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪೋಲಿಂಗ್ ಏಜೆಂಟರ ವೀಕ್ಷಣೆಗೆ ವ್ಯವಸ್ಥೆ: ಮಸ್ಟರಿಂಗ್ ಕೇಂದ್ರದಲ್ಲಿ ಸರ್ಕಾರದಿಂದ ಒದಗಿಸಲಾಗಿರುವ ಭದ್ರತೆ ಕುರಿತು ವಿವಿಧ ಪಕ್ಷಗಳ ವತಿಯಿಂದ ಪೋಲಿಂಗ್ ಏಜೆಂಟರು ಬಂದು ವೀಕ್ಷಣೆ ಮಾಡಬಹುದು. ಚುನಾವಣಾ ಅಧಿಕಾರಿಗಳ ಅನುಮತಿ ಪಡೆದು ಯಾವಾಗ ಬೇಕಾದರೂ ಮಸ್ಟರಿಂಗ್ ಕೇಂದ್ರದಲ್ಲಿರುವ ಮತಯಂತ್ರಗಳು, ವಿವಿಪ್ಯಾಟ್‌ಗಳನ್ನು ಸಿಸಿ ಟಿವಿ ಮೂಲಕ ವೀಕ್ಷಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ವಾರ್ಡ್‌ವಾರು ಮತದಾನ ಅಂಕಿ ಅಂಶ: ಜಾಲಹಳ್ಳಿ ಶೇ.50.3, ಜೆ.ಪಿ. ಉದ್ಯಾನ ಶೇ.43.5, ಯಶವಂತಪುರ ಶೇ.45.2, ಎಚ್‌ಎಂಟಿ ವಾರ್ಡ್ ಶೇ.42.3, ಲಕ್ಷ್ಮೀದೇವಿನಗರ ಶೇ.50, ಲಗ್ಗೆರೆ ಶೇ.43, ಕೊಟ್ಟಿಗೇಪಾಳ್ಯ ಶೇ.45.8, ಜ್ಞಾನಭಾರತಿ ಶೇ.47.9 ಹಾಗೂ ರಾಜರಾಜೇಶ್ವರಿ ನಗರ ವಾರ್ಡ್ ಶೇ.42.6 ಸೇರಿ ಒಟ್ಟು ಒಂಭತ್ತು ವಾರ್ಡ್‌ಗಳಿಂದ ಶೇ.45.3 ಮತದಾನ ನಡೆದಿದೆ. ನ.10ಕ್ಕೆ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ.