

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ತಲಾ ಒಂದು ಸ್ಥಾನ ಸೇರಿದಂತೆ ಪುತ್ತೂರು ತಾಲೂಕಿನಲ್ಲಿ ತೆರವಾಗಿರುವ ಸ್ಥಾನಗಳಿಗೆ 23ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿ ಈಗಾಗಲೇ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಈ ಬಾರಿ ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆ ಆರಂಭಕ್ಕೆ ಮುನ್ನವೇ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಘೋಷಣೆ ಮಾಡಿದೆ.
ಕೆದಂಬಾಡಿ ಗ್ರಾಮ ಪಂಚಾಯಿತಿ 4ನೇ ವಾರ್ಡಿನ ಸಾಮಾನ್ಯ ಸ್ಥಾನದಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿ ಹಾಗೂ ಅರಿಯಡ್ಕ ಗ್ರಾಮ ಪಂಚಾಯಿತಿಯ ಮಾಡ್ನೂರು 2ನೇ ವಾರ್ಡಿನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ಶಂಕರ ಮಾಡಂದೂರು ಅವರ ನಿಧನರಾಗಿದ್ದು, ಈ ಎರಡು ಸ್ಥಾನಗಳು ತೆರವಾಗಿತ್ತು.
ಉಪಚುನಾವಣೆಗೆ ಸಂಬಂಧಿಸಿ ಬುಧವಾರ ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ನಾಮಪತ್ರ ಸಲ್ಲಿಸಲು ನ.12 ಅಂತಿಮ ದಿನ. ನಾಮಪತ್ರಗಳ ಪರಿಶೀಲನೆ 13ರಂದು ನಡೆಯಲಿದೆ. 15ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆ ತನಕ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯಲಿದೆ. 26ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ಕೆದಂಬಾಡಿ ಗ್ರಾಮ ಪಂಚಾಯಿತಿಯ 4ನೇ ವಾರ್ಡಿನ ಸಾಮಾನ್ಯ ಸ್ಥಾನಕ್ಕೆ ಮೆಲ್ವಿನ್ ಮೊಂತೆರೋ ಹಾಗೂ ಅರಿಯಡ್ಕ ಗ್ರಾಮ ಪಂಚಾಯಿತಿಯ ಮಾಡ್ನೂರು 2ನೇ ವಾರ್ಡಿನ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ವಿನಾಯಕ ಅವರನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಕೆದಂಬಾಡಿ ಗ್ರಾಮ ಪಂಚಾಯಿತಿಯ 4ನೇ ವಾರ್ಡಿನ ಸಾಮಾನ್ಯ ಸ್ಥಾನದಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿರುವ ಎಸ್‌ಡಿಪಿಐ ಪಕ್ಷ, ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ ಅವರನ್ನು ಆಯ್ಕೆ ಮಾಡಿದೆ. ಬಿಜೆಪಿ ಈ ಎರಡೂ ಸ್ಥಾನಗಳಿಗೆ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲು ನಿರ್ಧರಿಸಿದ್ದರೂ ಅಭ್ಯರ್ಥಿಗಳ ಅಧಿಕೃತ ಘೋಷಣೆ ಮಾಡಿಲ್ಲ.