ಉಪಚುನಾವಣೆ: ‘ಶಿಗ್ಗಾಂವಿ’ ಕಿತ್ತುಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ !

Shiggavi byelection-1
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಸಂಸದ ಬಸವರಾಜ ಬೊಮ್ಮಾಯಿ ಅವರ ಸ್ಪರ್ಧೆಯಿಂದಾಗಿ ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಹೇಗಾದರೂ ಮಾಡಿ ‘ಕೈ’ವಶ ಮಾಡಿಕೊಳ್ಳಲು ಕಾಂಗ್ರೆಸ್ ಪಾಳಯ ಭಾರಿ ತಂತ್ರಗಾರಿಕೆ ಹೆಣೆಯುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆ ಬಿರುಸಿನಿಂದ ಸಾಗಿದೆ.

ರಾಜ್ಯದ ಗಮನ ಸೆಳೆಯುತ್ತಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ತಯಾರಿ ವಿಚಾರದಲ್ಲಿ ಕಾಂಗ್ರೆಸ್ ಸರಣಿ ಸಭೆಗಳ ಮೂಲಕ ಒಂದು ಹೆಜ್ಜೆ ಮುಂದಿದೆ. ಗೆಲುವಿಗಾಗಿ ರಣತಂತ್ರ ಹೆಣೆಯಲು ರಾಜ್ಯ, ರಾಷ್ಟ್ರ ನಾಯಕರು ಶಿಗ್ಗಾಂವಿಯತ್ತ ಸುಳಿಯುತ್ತಿದ್ದಾರೆ. ಈ ನಡುವೆ ಟಿಕೆಟ್​ಗಾಗಿ ಆಕಾಂಕ್ಷಿಗಳ ದಂಡೇ ಸೃಷ್ಟಿಯಾಗುತ್ತಿದೆ.

ಬಿಜೆಪಿ ಪ್ರತಿಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಉಪಚುನಾವಣೆ ಸಮಿತಿ ರಚಿಸಿದ್ದು, ಬಿಟ್ಟರೆ ಒಂದೂ ಸಭೆ ನಡೆಸಿಲ್ಲ.

ಕೈ ಪಡೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ರಾಜಶೇಖರ ಸಿಂಧೂರ ವಿರುದ್ಧ ಒಂದು ಬಾರಿ ಹಾಗೂ ನಾಲ್ಕು ಬಾರಿ ಬೊಮ್ಮಾಯಿ ವಿರುದ್ಧ ಒಟ್ಟಾರೆ ಸತತವಾಗಿ ಐದು ಬಾರಿ ಸೋಲು ಕಂಡಿದೆ. ಕ್ಷೇತ್ರದಲ್ಲಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದ್ದರೂ ಕಾಂಗ್ರೆಸ್​ಗೆ ಬೊಮ್ಮಾಯಿ ಅವರನ್ನು ಸೋಲಿಸಲು ಈವರೆಗೆ ಸಾಧ್ಯವಾಗಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಆದರೆ, ಶಿಗ್ಗಾಂವಿಯಲ್ಲಿ ಮಾತ್ರ ಗೆಲುವು ಸಾಧ್ಯವಾಗಿರಲಿಲ್ಲ.

ಇದೀಗ ಬೊಮ್ಮಾಯಿ ಅವರ ನಿರ್ಗಮನದಿಂದ ತೆರವಾಗಿರುವ ಕ್ಷೇತ್ರವನ್ನು ಮರಳಿ ಪಡೆಯುವ ಪಣ ತೊಟ್ಟಿದೆ. ಗ್ಯಾರಂಟಿ ಯೋಜನೆ, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಗಿಂತ ಹೆಚ್ಚು ಮತ ಪಡೆದ ಹಿನ್ನೆಲೆಯಲ್ಲಿ ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿ ಕೈ ಬಣ ಕಾರ್ಯತಂತ್ರ ರೂಪಿಸುತ್ತಿದೆ.

ಉಪಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಬೆಂಗಳೂರು ಹಾಗೂ ಶಿಗ್ಗಾಂವಿಯಲ್ಲಿ ಈವರೆಗೆ ಎರಡು ಸಭೆ ನಡೆದಿದೆ. ಜು. 3ರಂದು ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲೇ ಮಾಜಿ ಶಾಸಕ ಅಜೀಮಪೀರ್ ಖಾದ್ರಿ ಹಾಗೂ ಯಾಸೀರ್ ಪಠಾಣ ಬಣಗಳ ನಡುವೆ ಟಿಕೆಟ್​ಗಾಗಿ ಹೈಡ್ರಾಮಾ ನಡೆದಿತ್ತು. ಸಚಿವರ ಕಾರಿಗೆ ಮುತ್ತಿಗೆ ಹಾಕಿ ಆಕಾಂಕ್ಷಿಗಳ ಬೆಂಬಲಿಗರು ಜೈಕಾರ ಹಾಕಿದ್ದರು.

ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದಲ್ಲಿ ಗೌಪ್ಯ ಸಮೀಕ್ಷೆ ನಡೆಸಿದೆ. ಆಕಾಂಕ್ಷಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ಅಭ್ಯರ್ಥಿ ಆಯ್ಕೆ ಎರಡೂ ಪಕ್ಷಕ್ಕೂ ಸವಾಲಾಗಿ ಪರಿಣಮಿಸಿದೆ.

ಬೊಮ್ಮಾಯಿ ಗುಪ್ತಗಾಮಿನಿ!

ಕ್ಷೇತ್ರದಲ್ಲಿ ಗಟ್ಟಿಯಾಗಿ ಬೇರೂರಿದ್ದ ಬಸವರಾಜ ಬೊಮ್ಮಾಯಿ ತಮ್ಮ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡುತ್ತಾರೆ? ಯಾರನ್ನು ಬೆಂಬಲಿಸುತ್ತಾರೆ ಎಂಬ ಕುರಿತು ಈವರೆಗೆ ಉತ್ತರ ಸಿಕ್ಕಿಲ್ಲ. ಪುತ್ರ ಭರತ ಬೊಮ್ಮಾಯಿ ಸೇರಿದಂತೆ ಕೆಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಅಷ್ಟೇನೂ ಮುನ್ನೆಲೆಗೆ ಬಂದಿಲ್ಲ. ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಉಳಿಸಿಕೊಳ್ಳಬೇಕು ಎಂದರೆ ಬೊಮ್ಮಾಯಿ ಅವರ ಶ್ರಮ, ತಂತ್ರಗಾರಿಕೆ ಅತ್ಯಗತ್ಯ. ಆದರೆ, ಈ ವಿಚಾರದಲ್ಲಿ ಬೊಮ್ಮಾಯಿ ಅವರು ಸದ್ಯಕ್ಕೆ ಗುಪ್ತಗಾಮಿನಿಯಂತಿದ್ದಾರೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಜು. 12ರಿಂದ ‘ಧನ್ಯವಾದ ಯಾತ್ರೆ’ ಹಮ್ಮಿಕೊಂಡಿದ್ದು, ಇದು ಉಪಚುನಾವಣೆಗೆ ಮುನ್ನುಡಿಯಾಗುವುದೇ ಕಾದುನೋಡಬೇಕಿದೆ.

ಆಕಾಂಕ್ಷಿಗಳದ್ದೇ ತಲೆನೋವು

ಶಿಗ್ಗಾಂವಿ ಪಟ್ಟಣದಲ್ಲಿ ಜು. 5ರಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಭೆಯಲ್ಲೂ ಆಕಾಂಕ್ಷಿಗಳ ಗದ್ದಲ ಮುಂದುವರಿದಿತ್ತು. ಖಾದ್ರಿ ಹಾಗೂ ಪಠಾಣ ಬೆಂಬಲಿಗರು ಮುಖಂಡರ ಎದುರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಇದರಿಂದ ಮುಖಂಡರಿಗೆ ಮುಜುಗರ ಉಂಟಾಗಿತ್ತು.

ಶಿಗ್ಗಾಂವಿ ಉಪಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಈ ಚುನಾವಣೆ ಯುದ್ಧವಿದ್ದಂತೆ. ಗೆಲ್ಲಬೇಕು ಎಂಬ ಉತ್ಸಾಹ, ಹುರುಪು ಕಾರ್ಯಕರ್ತರಲ್ಲಿ ಹೆಚ್ಚಾಗಿದೆ. ಈ ಬಾರಿ ಗೆಲುವು ನಮ್ಮದಾಗಲಿದೆ. ನಾನೂ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದು, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ. | ಸಂಜೀವಕುಮಾರ ನೀರಲಗಿ, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಚುನಾವಣೆ ಎದುರಿಸಲು ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷ ಸಿದ್ಧವಿದೆ. ಪಕ್ಷ ಯಾರಿಗೇ ಟಿಕೆಟ್ ಕೊಡಲಿ ಕಾರ್ಯಕರ್ತರೆಲ್ಲ ಸೇರಿ ಹಗಲು- ರಾತ್ರಿ ದುಡಿಯುವ ಮೂಲಕ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿವೆ. ಕಾಂಗ್ರೆಸ್​ನ ಯಾವುದೇ ತಂತ್ರವೂ ಫಲಿಸಲ್ಲ. | ಶಿವಾನಂದ ಮ್ಯಾಗೇರಿ, ಬಿಜೆಪಿ, ಶಿಗ್ಗಾಂವಿ ತಾಲೂಕಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net