

ಕಾರ್ಗಲ್: ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ. ಇದು ಸಾಕಾರಗೊಳ್ಳಬೇಕೆಂದರೆ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಸರಿಯಾದ ಸಮಯದಲ್ಲಿ ಅರ್ಹ ಫಲಾನುಭವಿಗಳನ್ನು ತಲುಪಬೇಕಾಗಿದೆ. ಆಗ ಮಾತ್ರ ಭಾರತವು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಆರ್ಥಿಕ ಸಾಕ್ಷರತಾ ಅಧಿಕಾರಿ ವಿ.ಪುಷ್ಪಾ ಹೇಳಿದರು.
ಇಲ್ಲಿನ ಕೆಪಿಸಿ ಅಫೀಷಿಯಲ್ಸ್ ರಿಕ್ರಿಯೇಶನ್ ಕ್ಲಬ್ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿ ಎಸ್‌ಬಿಐ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಪ್ರಗತಿಗೆ ಪೂರವಾಗಿ ಪ್ರಧಾನ ಮಂತ್ರಿಗಳು ನಾಲ್ಕು ವರ್ಗದ ಜನರನ್ನು ಗಣನೆಗೆ ತೆಗದುಕೊಂಡು ಯೋಜನೆ ರೂಪಿಸಿದ್ದಾರೆ. ರೈತಾಪಿ ವರ್ಗ, ಯುವ ಜನಾಂಗ, ಮಹಿಳಾ ವರ್ಗ ಹಾಗೂ ನಾಲ್ಕನೇಯದಾಗಿ ಅಶಕ್ತರು, ದುರ್ಬಲರು, ಬುಡಕಟ್ಟು ಜನಾಂಗದವರನ್ನು ಕೇಂದ್ರೀಕರಿಸಿ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ಜನ ಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯಕ್ರಮವಾಗಿದೆ ಎಂದು ವಿವರಿಸಿದರು.
ಪಪಂ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಮಂಡಗಳಲೆ ಮಾತನಾಡಿ, ಕಾರ್ಗಲ್ ಪಪಂ ವ್ಯಾಪ್ತಿಯಲ್ಲಿ 301 ಬೀದಿಬದಿ ವ್ಯಾಪಾರಿಗಳು ಕೇಂದ್ರ ಸರ್ಕಾರದ ಯೋಜನೆಯ ಫಲಾನುಭವಿಗಳಾಗಿದ್ದಾರೆ. 20 ಕುಲ ಕಸಬುಗಳನ್ನು ಮಾಡುವ 230 ಮಂದಿ ವಿಶ್ವ ಕರ್ಮ ಸಮಾಜದ ಅಡಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಜತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 419 ಜನ ಹೆಸರು ದಾಖಲಿಸಿದ್ದು, 112 ಮಂದಿ ಮೊದಲ ಕಂತಿನ ಮೂಲಕ ಫಲಾನುಭವಿಗಳಾಗಿದ್ದಾರೆ. ಈ ಮೂರು ಯೋಜನೆಗಳು ಕೇಂದ್ರ ಸರ್ಕಾರದ ಯೋಜನೆಗಳಾಗಿವೆ. ಸ್ಥಳೀಯ ಪಪಂ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಮಾಡಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಔಪಚಾರಿಕವಾಗಿ ಆಗಮಿಸಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಪಪಂ ಮಾಜಿ ಉಪಾಧ್ಯಕ್ಷ ಪಿ.ಮಂಜುನಾಥ್, ಸದಸ್ಯರಾದ ನಾಗರಾಜ್ ವಾಟೆಮಕ್ಕಿ, ಉಮೇಶ್ ಕೆಮ್ಮಣಗಾರು, ಬಾಲಸುಬ್ರಹ್ಮಣ್ಯ, ಕೆ.ಸಿ.ಹರೀಶ್, ಎಂ.ರಾಜು, ಜಯಲಕ್ಷ್ಮೀ, ಕಾರ್ಗಲ್ ಕೆನರಾ ಬ್ಯಾಂಕ್ ಶಾಖೆ ಮ್ಯಾನೇಜರ್ ಪಿ.ರಕ್ಷಿತ್, ಜೋಗ ಎಸ್‌ಬಿಐ ಶಾಖೆ ಮ್ಯಾನೇಜರ್ ರವೀಂದ್ರ ಬಾಬು, ಎಸ್‌ಬಿಐ ಪ್ರಾದೇಶಿಕ ಕಚೇರಿ ಅಧಿಕಾರಿ ಬಾಲಾಜಿ, ಮೋಹನ್ ಎಂ.ಪೈ ಇತರರಿದ್ದರು.