ಕಾವೇರಿ 5ನೇ ಹಂತದ ಯೋಜನೆ ಅ.16 ರಂದು ಲೋಕಾರ್ಪಣೆ; ಸಿಎಂ, ಡಿಸಿಎಂ ಚಾಲನೆ

bwssb
Published on

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಮಹತ್ವದ ಕಾವೇರಿ 5ನೇ ಹಂತದ ಯೋಜನೆಗೆ ಬುಧವಾರ (ಅ.16) ಚಾಲನೆ ಸಿಗಲಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿರುವ (ಟಿ.ಕೆ. ಹಳ್ಳಿ) ಬೆಂಗಳೂರು ಜಲಮಂಡಳಿಯ ಪಂಪಿಂಗ್​ ಕೇಂದ್ರದಲ್ಲಿ ಬೆಳಗ್ಗೆ 10.30ಕ್ಕೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಚಾಲನೆ ನೀಡಲಿದ್ದಾರೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 2014ರಲ್ಲಿ ಅಂದಿನ ಕಾಂಗ್ರೆಸ್​ ಸರ್ಕಾರ 5ನೇ ಹಂತದ ಯೋಜನೆಗೆ ಅನುಮೋದನೆ ನೀಡಿತ್ತು. ಯೋಜನೆಗೆ ಎರಡು ಹಂತಗಳಲ್ಲಿ ಜಪಾನ್​ ಇಂಟರ್​ನ್ಯಾಷನಲ್​ ಕೋ&ಆಪರೇಟಿವ್​ ಏಜೆನ್ಸಿ (ಜೈಕಾ) 4,336 ಕೋಟಿ ರೂ. ಯೋಜನಾ ವೆಚ್ಚ ಭರಿಸಿದೆ. ಜೈಕಾ ಶೇ.84 ಹಣ ಒದಗಿಸಿದ್ದು, ಉಳಿದ ಶೇ.16 ಮೊತ್ತವನ್ನು ರಾಜ್ಯಸರ್ಕಾರ ಹಾಗೂ ಜಲಮಂಡಳಿ ಭರಿಸಿದೆ. 5,550 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ.

ಯೋಜನೆಯಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ 775 ಎಂಎಲ್​ಡಿ ನೀರು ಲಭಿಸಲಿದೆ. ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ. ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ನಿವಾಸಿಗಳಿಗೆ ಕಾವೇರಿ ನೀರು ಲಭ್ಯವಾಗಲಿದೆ. ನಗರದ ಹೊರವಲಯಕ್ಕೆ ಬರುವ ಕಾವೇರಿ ನೀರು, ವಾಜರಹಳ್ಳಿ ಬಳಿ ಪೈಪ್​ಲೈನ್​ ವಿಭಜನೆಯಾಗಿ ಸ್ಟೀಲ್​ ಟ್ರಂಕ್​ ಮೇನ್​ ಮೂಲಕ ನಗರದ ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಲಿಂಗಧೀರನಹಳ್ಳಿ, ಸಿಂಗಾಪುರ, ಎಸ್​ಎಂವಿ 6ನೇ ಬ್ಲಾಕ್​, ಕಾಡುಗುಡಿ ಮತ್ತು ಚೊಕ್ಕನಹಳ್ಳಿ ಜಲಾಶಯಗಳಿಗೆ ನೀರು ತುಂಬಿಸಲಾಗುವುದು.

ಬೂಸ್ಟರ್​ ಪಂಪಿಂಗ್​ ಕೇಂದ್ರ

ಕಾವೇರಿ 5ನೇ ಹಂತದ ಯೋಜನೆಯಲ್ಲಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಸುಧಾರಿತ ಬೂಸ್ಟರ್​ ಪಂಪಿಂಗ್​ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇವುಗಳ ಸಹಾಯದಿಂದ ಸುಮಾರು 110 ಕಿ.ಮೀ. ದೂರದಿಂದ ಬೃಹತ್​ ಉಕ್ಕಿನ ಪೈಪ್​ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್​ ಎತ್ತರಕ್ಕೆ ಹರಿಸಿ ನೀರು ಸರಬರಾಜು ಮಾಡಲಾಗುತ್ತದೆ.

50 ಸಾವಿರ ಸಂಪರ್ಕ ನೋಂದಣಿ

ಜಲ ಮಂಡಳಿಯಿಂದ ನಗರದಲ್ಲಿ ಈವರೆಗೆ 10.64 ಲ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಮೂಲಕ 4 ಲ ಹೊಸ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಸದ್ಯ 110 ಹಳ್ಳಿಗಳಿಂದ ಸುಮಾರು 50 ಸಾವಿರ ಸಂಪರ್ಕ ನೋಂದಣಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net