

ಬೆಂಗಳೂರು: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರಿ ಶಾಲೆ, ಕಾಲೇಜು, ಬಿಬಿಎಂಪಿ ಅಧೀನದ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಪಾರ್ಕ್ಗಳು, ಸರ್ಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳು ಸೇರಿದಂತೆ ವಿವಿಧೆಡೆಗಳಲ್ಲಿ ಜಲಮಂಡಳಿ ವತಿಯಿಂದ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಮಂಡಳಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ನೀರು ಇಂಗಿಸುವ ಪ್ರಯತ್ನದ ಭಾಗವಾಗಿ ಒಂದುವಾರದಲ್ಲಿ ಕ್ರಿಯಾಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈಗಾಗಲೇ ಮಂಡಳಿ ವತಿಯಿಂದ 1 ಸಾವಿರ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವಂತಹ ಪ್ರದೇಶಗಳಲ್ಲಿ ಮಳೆ ನೀರು ಉಳಿತಾಯ ಪದ್ದತಿಯನ್ನು ಅಳವಡಿಸಲಾಗುತ್ತದೆ. ಈ ನೀರನ್ನು ಮರುಬಳಕೆ ಮಾಡುವ ಹಾಗೂ ಹೆಚ್ಚುವರಿ ನೀರನ್ನು ಇಂಗುಗುಂಡಿಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿಸುವ ವ್ಯವಸ್ಥೆಯನ್ನು ಮಂಡಳಿಯ ವತಿಯಿಂದ ಅಳವಡಿಸಲಾಗುತ್ತದೆ. ಜತೆಗೆ ಮಾಹಿತಿ ಫಲಕ ಹಾಕಲಾಗುತ್ತದೆ ಎಂದರು.
ಸರ್ಕಾರಿ ಶಾಲೆ, ಕಾಲೇಜು, ಬಿಬಿಎಂಪಿಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳಲ್ಲಿ ಜಲಮರುಪೂರಣ ವ್ಯವಸ್ಥೆ ಅಳವಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಹಾಗೂ ಅದರಿಂದ ಆಗುತ್ತಿರುವ ಉಪಯೋಗವನ್ನು ಪ್ರಾಯೋಗಿಕವಾಗಿ ವೀಸಬೇಕು. ಇದರಿಂದ ತಮ್ಮ ಅಕ್ಕ ಪಕ್ಕದ ಪ್ರದೇಶದಲ್ಲಿ ಹೆಚ್ಚಿನ ಜನರಿಗೆ ತಿಳುವಳಿಕೆಯನ್ನು ಹಂಚುವ ಕಾರ್ಯ ಆಗುತ್ತದೆ. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿ, ವಿದ್ಯಾರ್ಥಿಗಳಿಗೆ ಪ್ರಾತ್ಯಕೆ ನೀಡುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಜಲಮಂಡಳಿ ವತಿಯಿಂದ ಹೆಚ್ಚುವರಿಯಾಗಿ 1 ಸಾವಿರ ಇಂಗುಗುಂಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ವಲಯವಾರು ಪ್ರದೇಶಗಳಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳ ಆವರಣದಲ್ಲೂ ಮಳೇ ನೀರು ಕೊಯ್ಲು ಪದ್ದತಿ ಅಳವಡಿಸಲಾಗುತ್ತದೆ. ಜತೆಗೆ ಬಿಎಂಟಿಸಿ ಬಸ್ಸ್ಟ್ಯಾಂಡ್ ಸೇರಿದಂತೆ ವಿವಿಧೆಡೆ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತದೆ.
-ಡಾ.ವಿ.ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ