

ಬಂಟ್ವಾಳ: ಭಾರತೀಯ ಸಂಸ್ಕೃತಿ ಕೃಷಿ ಸಂಸ್ಕೃತಿಯ ಮೂಲದಿಂದ ಬೆಳೆದು ಬಂದಿದೆ. ಬಹುಭಾಷಾ ಸಂಸ್ಕೃತಿ ಇದ್ದರೂ ಏಕಭಾವವನ್ನು ಹೊಂದಿದೆ ಎಂದು ಪತ್ರಕರ್ತ ಜಯಾನಂದೆ ಪೆರಾಜೆ ಹೇಳಿದರು.
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಕುಕ್ಕಾಜೆಯಲ್ಲಿ ಏರ್ಪಡಿಸಲಾದ 3 ದಿನಗಳ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಚಿ ಹಿ.ಪ್ರಾ. ಶಾಲಾ ಸಂಚಾಲಕ ನೂಜಿಬೈಲು ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಚಂದ್ರಶೇಖರ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು.
ಭಜನಾ ಮಂಡಳಿ ಅಧ್ಯಕ್ಷ ಗಣೇಶ ಐತಾಳ್ ಸ್ವಾಗತಿಸಿದರು. ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಸ್ತಾವನೆ ಗೈದರು. ಶೈಲಜಾ ಮತ್ತು ಶಿಕ್ಷಕ ಉಮಾನಾಥ ರೈ ಸನ್ಮಾನಪತ್ರ ವಾಚಿಸಿದರು. ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು.
ಸಮಾರೋಪವು ಮಂಚಿ ಗ್ರಾ.ಪಂ. ಅಧ್ಯಕ್ಷ ಜಿ.ಎಂ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಪಿ.ರಮೇಶರಾವ್ ಪತ್ತುಮುಡಿ, ನಿಶ್ಚಲ್ ಜಿ.ಶೆಟ್ಟಿ ಕಲ್ಲಾಡಿ ಅತಿಥಿಗಳಾಗಿದ್ದರು.
ಆಕಾಶವಾಣಿ ಕಲಾವಿದೆ ಗಮಕಿ ಮಂಜುಳಾ ಸುಬ್ರಮಣ್ಯ, ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಿಜಯಾಶೆಟ್ಟಿ ಸಾಲೆತ್ತೂರು, ಲೇಖಕಿ ಅನಿತಾ ನರೇಶ್ ಮಂಚಿ ಅವರನ್ನು ಗೌರವಿಸಲಾಯಿತು. ಗಮಕ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಮತ್ತು ಕುಮಾರವ್ಯಾಸ ಭಾರತ ಗಮಕ ವಾಚನ, ವ್ಯಾಖ್ಯಾನ ನಡೆಯಿತು. ಮಂಜುಳಾ ಸುಬ್ರಮಣ್ಯ ವಾಚನ ಮಾಡಿ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಿದರು. ಮಂಜುಳಾ ಗುರುರಾಜ್ ಅವರಿಂದ ಹರಿಕಥೆ, ಶಿವರಂಜಿನಿ ಕಲಾಕೇಂದ್ರ ಪೊಳಲಿ ಅವರಿಂದ ಸಾಂಸ್ಕೃತಿಕ ವೈವಿಧ್ಯ, ಶಾರದಾ ಎಸ್.ರಾವ್ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ಜನಮೆಚ್ಚುಗೆ ಪಡೆಯಿತು.