

ಗುಬ್ಬಿ: ಕೊಬ್ಬರಿ ಖರೀದಿಗೆ ಮುಂದಾಗಿರುವ ರಾಜ್ಯ ಸರ್ಕಾರ 10,300 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ ನಫೆಡ್ ಮೂಲಕ ಖರೀದಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಅರಣ್ಯ ವಲಯದಲ್ಲಿನ ಶ್ರೀಗಂಧದ ಪ್ಲಾಂಟೇಷನ್ ವೀಕ್ಷಿಸಿ, ವನಮಹೋತ್ಸವಕ್ಕೆ ಶ್ರೀಗಂಧದ ಸಸಿ ನೆಡುವ ಮೂಲಕ ಶನಿವಾರ ಚಾಲನೆ ನೀಡಿ ಮಾತನಾಡಿದರು.ದಿನದಿಂದ ದಿನಕ್ಕೆ ಕೊಬ್ಬರಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಉತ್ತರ ಭಾರತಕ್ಕೆ ಕೊಬ್ಬರಿ ಹೋಗುತ್ತಿಲ್ಲ. ಹಾಗಾಗಿ ದರ ಕಡಿಮೆಯಾಗಿದ್ದು, ಸರ್ಕಾರ ರೈತರ ಹಿತ ಕಾಯುವ ದೃಷ್ಟಿಯಿಂದ ನೆಡ್ ಮೂಲಕ 2 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಯೋಜನೆ ರೂಪಿಸಿದೆ ಎಂದರು.
ನೀರು ಹೆಚ್ಚು ಮಾಡುವ ಶಕ್ತಿ ಕಂಡಿಲ್ಲ. ಆ ಕೆಲಸ ಮಾಡುವ ವ್ಯಕ್ತಿ ಕೂಡಾ ಹುಟ್ಟಿಲ್ಲ. ವಾತಾವರಣ ತಂಪಾಗಬೇಕು ಎಂದರೆ ಅರಣ್ಯಗಳನ್ನು ಬೆಳೆಸುವುದು ಅನಿವಾರ್ಯ. ಅರಣ್ಯ ಇಲಾಖೆ ಮಾತ್ರ ಕಾಡು ಬೆಳೆಸಬೇಕು ಎಂದರೆ ಅದು ಸಾಧ್ಯವಿಲ್ಲ. ರೈತರೂ ಇದರಲ್ಲಿ ಭಾಗಿಯಾಗಬೇಕು. ರೈತರು ಅರಣ್ಯ ಬೆಳೆಯಲು ಮುಂದಾದರೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ವರ್ಷಕ್ಕೆ ಪ್ರತಿಗಿಡಕ್ಕೆ 125 ರೂಪಾಯಿ ಸಿಗುತ್ತದೆ. ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಅರಣ್ಯ ಇಲಾಖೆ ಶ್ರೀಗಂಧದ ಮರಗಳ ಜತೆಯಲ್ಲಿ ಬೇರೆ ಸಸಿಗಳನ್ನು ಅಭಿವೃದ್ಧಿ ಮಾಡಿದರೆ ಉತ್ತಮ. ಶ್ರೀಗಂಧದ ಮರಗಳನ್ನು ಕಷ್ಟಪಟ್ಟು ಬೆಳೆದು ಕಳ್ಳರು ಕದ್ದರೆ ಶ್ರಮವೇ ವ್ಯರ್ಥವಾಗುತ್ತದೆ. ನನ್ನ ಮನೆಯ ಕಿಟಕಿ ಪಕ್ಕದಲ್ಲೇ ಇದ್ದ ಗಂಧದ ಮರವನ್ನೇ ಕಳ್ಳರು ಬಿಡಲಿಲ್ಲ. ಸಿಸಿ ಕ್ಯಾಮರಾ ಇದ್ದರೂ ಕೈಚಳಕ ತೋರಿದ್ದರು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕಿಡಿಗಣಪ್ಪ, ಜಿಲ್ಲಾ ಅರಣ್ಯಾಧಿಕಾರಿ ಗಿರೀಶ್, ನಾಗರಾಜು, ಎಸಿಎಫ್ ಸಂತೋಷ್‌ನಾಯಕ್, ಸುರೇಂದ್ರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸಿ.ರವಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಿತೇಂದ್ರ ಇದ್ದರು.
ಗೋಶಾಲೆಗೆ ಮೇವು ಕೊಟ್ಟ ರೈತ: ನಿಟ್ಟೂರು ಹೋಬಳಿ ಬೆಣಚಿಗೆರೆ ರೈತ ಹಾಗೂ ಗುಬ್ಬಿ ತಾಲೂಕು ವಿಜಯವಾಣಿ ಬಿಡಿ ವರದಿಗಾರ ಗುರುಚನ್ನಬಸವಯ್ಯ ಎರಡು ಎಕರೆಯಲ್ಲಿ ಬೆಳೆದ ಜೋಳದ ಹಸಿ ಮೇವನ್ನು ಚಿದಂಬರಾಶ್ರಮ ಗೋಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಮಳೆ ಸಕಾಲಕ್ಕೆ ಬರಲು ಹಸಿರು ಕ್ರಾಂತಿ ನಡೆಸಬೇಕಿದೆ. ಅಡಕೆ ಮತ್ತು ತೆಂಗು ಬೆಳೆಗೆ ನೀಡುವ ಮಹತ್ವವನ್ನು ಸಾಂಪ್ರದಾಯಿಕ ಮರಗಳನ್ನು ಬೆಳೆಸುವಲ್ಲಿಯೂ ತೋರಬೇಕು. ರೈತರು ಹೊಲ, ತೋಟಗಳ ಬದಿಯಲ್ಲಿ ಉತ್ತಮ ತಳಿಗಳ ಮರಗಳನ್ನು ಬೆಳೆಸಿದರೆ ಮಳೆ ಹೆಚ್ಚಾಗಲಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ತಹಸೀಲ್ದಾರ್ ಡಾ.ಪ್ರದೀಪ್‌ಕುಮಾರ್ ಹಿರೇಮಠ, ಟಿಎಪಿಸಿಎಂಸಿಎಸ್ ಅಧ್ಯಕ್ಷ ಕಿಡಿಗಣ್ಣಪ್ಪ, ಮುಖಂಡರಾದ ಕು.ರಾಮಣ್ಣ, ಬೈರಣ್ಣ, ಎಸ್.ಡಿ.ದಿಲೀಪ್‌ಕುಮಾರ್, ಕಾಡಶೆಟ್ಟಿಹಳ್ಳಿ ಸತೀಶ್, ಪತ್ರೆ ದಿನೇಶ್, ಕಂದಾಯ ನಿರೀಕ್ಷಕ ಕೆ.ವಿ.ನಾರಾಯಣ್ ಇದ್ದರು.
ಜಿಲ್ಲೆಯ 6 ತಾಲೂಕುಗಳು ಸಂಪೂರ್ಣ ಅಂತರ್ಜಲ ಕಳೆದುಕೊಂಡು ಮರುಭೂಮಿ ಆಗಲಿವೆ. ಕೇಂದ್ರ ಸರ್ಕಾರದ 1,230 ಕೋಟಿ ರೂಪಾಯಿ ಅಂತರ್ಜಲ ಅಭಿವೃದ್ಧಿ ಮಾಡಲು ನಾನಾ ಯೋಜನೆ ನೀಡಿದೆ. ಅಂತರ್ಜಲ ಹೆಚ್ಚಾಗಬೇಕಾದಲ್ಲಿ ಅರಣ್ಯ ಬೆಳೆಸಬೇಕು. ಹಸಿರು ಕ್ರಾಂತಿಯ ನಂತರವೇ ನಿಸರ್ಗ ಮಳೆ ಸುರಿಸುತ್ತದೆ. ಜೆ.ಸಿ.ಮಾಧುಸ್ವಾಮಿ ಸಚಿವ