

ಮಂಡ್ಯ: ನಬಾರ್ಡ್ ಸಂಸ್ಥೆ ರೈತರಿಗೆ ಆಧಾರ ಸ್ತಂಭವಾಗುವುದರ ಜತೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಶ್ಲಾಘಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಬಾರ್ಡ್ ಹಾಗು ವಿಕಸನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಖರೀದಿದಾರರ-ಮಾರಾಟಗಾರರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ರೈತರ ವಿನೂತನ ಚಿಂತನೆಗಳಿಗೆ ವೇದಿಕೆ ದೊರಕಿಸಿಕೊಡುವ ಒಳ್ಳೆಯ ಸಂಸ್ಥೆಯಾಗಿದೆ ಎಂದರು.
ರೈತರಿಗೆ ಅನುಕಂಪದ ಮಾತಗಳನ್ನೇ ಆಡಿ ಅವರನ್ನ ಸಮಾಧಾನಪಡಿಸಲಾಗುತ್ತಿದೆ. ಇದಕ್ಕಷ್ಟೇ ಸೀಮಿತವಾಗಬಾರದು. ಬದಲಿಗೆ ರೈತರಿಗೆ ಅನುಕಂಪದ ಜತೆಗೆ ಅವಕಾಶ ಸೃಷ್ಟಿ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಅನ್ನದಾತರಿಗೆ ವಿಶೇಷವಾದ ಸ್ಥಾನಮಾನ ಕಲ್ಪಿಸಬೇಕು. ಮಾತ್ರವಲ್ಲದೆ ಅವರ ಮನಸ್ಥಿತಿಯನ್ನು ಕುಗ್ಗಿಸದೇ ಹಿಗ್ಗಿಸಬೇಕಿದೆ. ನಾವು ರೈತರನ್ನ ಬೆಳಗಿಸಿದರೆ, ಅವರು ಸಮಾಜವನ್ನ ಬೆಳಗಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ನಬಾರ್ಡ್ ಪ್ರಾದೇಶಿಕ ಕಚೇರಿಯ ಮುಖ್ಯಮಹಾಪ್ರಬಂಧಕ ಟಿ.ರಮೇಶ್, ಉಪ ಮಹಾಪ್ರಬಂಧಕಿ ದೀಪಾ ಎಸ್.ಪಿಳ್ಳೈ, ಡಿಡಿಎಂ ಹರ್ಷಿತಾ, ವಿಕಸನ ಸಂಸ್ಥೆಯ ಮಹೇಶ್ ಚಂದ್ರಗುರು ಇತರರಿದ್ದರು.