

ಕಡೂರು: ತೋಟಗಾರಿಕೆ ಬೆಳೆಗಳ ಮೇಲೆ ಅವಲಂಬಿತಗೊಳ್ಳದೆ ದವಸ, ಧಾನ್ಯಗಳನ್ನು ಬೆಳೆಯಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಎಪಿಎಂಸಿಯಲ್ಲಿ ಕಡೂರು ಪ್ರಗತಿ ರೈತ ಉತ್ಪಾದಕ ಕಂಪನಿ ಮತ್ತು ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿಯಿಂದ ಬೆಂಬಲ ಬೆಲೆ ಯೋಜನೆಯ ಸೂರ್ಯಕಾಂತಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ರೈತರು ತೆಂಗು ಮತ್ತು ಅಡಕೆ ಬೆಳೆಯಲು ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೆ ದವಸ, ಧಾನ್ಯಗಳನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆಗಳಿಗೆ ವೆಜ್ಞಾನಿಕ ಬೆಲೆ ಸಿಗದಿರುವುದು ಇದಕ್ಕೆ ಪ್ರಮುಖ ಕಾರಣ. ಜತೆಗೆ ಕೃಷಿ ಜಮೀನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇದರಿಂದ ಕೃಷಿ ಜಮೀನಿನ ವಿಸ್ತೀರ್ಣ ಕೂಡ ಕಡಿಮೆಯಾಗುತ್ತಿದೆ. ಇದರಿಂದ ಮುಂದೊಂದು ದಿನ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ ಎಂದರು.
ಈ ಹಿಂದೆ ಕಡೂರಿನಲ್ಲಿ ರಾಗಿ ಮತ್ತು ಕೊಬ್ಬರಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಮೊದಲ ಬಾರಿಗೆ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಈ ಮೂಲಕ ಎಣ್ಣೆಕಾಳುಗಳನ್ನು ಬೆಳೆಯುವಂತೆ ಸರ್ಕಾರ ರೈತರನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಅಶೋಕ್ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೂರ್ಯಕಾಂತಿ ಬೆಳೆದಿದ್ದರೂ ಬೆಳೆ ಸಮೀಕ್ಷೆಯಲ್ಲಿ ನಮೂದಾಗದ ಕಾರಣ ರೈತರು ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ರೈತರು ಜಾಗೃತಿ ವಹಿಸಬೇಕಿದೆ ಎಂದರು.
ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳದ ಅಧಿಕಾರಿ ಭರತ್ ಮಾತನಾಡಿ, ಅ.8ರಂದು ಖರೀದಿ ಆರಂಭವಾಗಲಿದೆ. 82 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. 1 ಕ್ವಿಂಟಾಲ್ ಸೂರ್ಯಕಾಂತಿಗೆ 7,290 ರೂ. ದರ ನಿಗದಿಪಡಿಸಲಾಗಿದೆ. ಈವರೆಗೂ 60 ಟನ್ ಖರೀದಿಗೆ ಅವಕಾಶ ನೀಡಲಾಗಿದೆ. ಗುಣಮಟ್ಟದ ಉತ್ಪನ್ನಗಳನ್ನು ರೈತರು ನೀಡಬೇಕು ಎಂದು ಹೇಳಿದರು.
ರಾಜ್ಯ ಮಾರಾಟ ಮಹಾಮಂಡಳದ ಜಿಲ್ಲಾ ಸಹಾಯಕ ನಿರ್ದೇಶಕ ವಿಶ್ವನಾಥ ರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್, ಡಿ.ಉಮೇಶ್, ಎಪಿಎಂಸಿ ಕಾರ್ಯದರ್ಶಿ ಧರ್ಮರಾಜ್, ಯರದಕೆರೆ ಓಂಕಾರ್, ಮಲಿಯಪ್ಪ, ಧರ್ಮಣ್ಣ, ಜಯಣ್ಣ, ತಿಮ್ಮರಾಯಪ್ಪ ಇತರರಿದ್ದರು.