

ಪಂಚನಹಳ್ಳಿ: ಒಂದು ಆರ್ಥಿಕ ವರ್ಷದಲ್ಲಿ ನೂರು ಜೀವ ವಿಮಾ ಪಾಲಿಸಿ ಖರೀದಿಸುವ ಗ್ರಾಮವನ್ನು ಎಲ್ಐಸಿ ವಿಮಾ ಗ್ರಾಮ ಎಂದು ಘೋಷಿಸಿಲಾಗುತ್ತದೆ. ಅದೇ ರೀತಿ ಗಂಗನಹಳ್ಳಿಯನ್ನು ವಿಮಾ ಗ್ರಾಮ ಎಂದು ಘೋಷಿಸಲಾಗುತ್ತಿದೆ ಎಂದು ಎಲ್‌ಐಸಿಯ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಹೇಳಿದರು.
ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಮಾ ಗ್ರಾಮ ಘೋಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿನ್ನಲೆಯಲ್ಲಿ ಎಲ್ಐಸಿಯಿಂದ ಗ್ರಾಮಕ್ಕೆ 50 ಸಾವಿರ ರೂಪಾಯಿಯನ್ನು ಕೊಡುಗೆ ರೂಪದಲ್ಲಿ ನೀಡಲಾಗುತ್ತಿದೆ. ಇದರಿಂದ ಸೋಲಾರ್‌ವಿದ್ಯುತ್ ದೀಪಗಳನ್ನು ಖರೀದಿಸಿ ಗ್ರಾಮದಲ್ಲಿ ಅಳವಡಿಸಲಾಗಿದೆ ಎಂದರು.
ಪ್ರತಿನಿಧಿಗಳು ಎಲ್ಐಸಿ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಜನರನ್ನು ಪಾಲಿಸಿ ಖರೀದಿಸುವಂತೆ ಮನವೊಲಿಸುವ ಕೆಲಸ ಮಾಡುವವರು ಪ್ರತಿನಿಧಿಗಳು. ಹಾಗಾಗಿ ಪ್ರತಿನಿಧಿಗಳೇ ಎಲ್ಐಸಿಯ ಬುನಾದಿಯಾಗಿದ್ದಾರೆ. ಸಂಸ್ಥೆಯ ಅಳಿವು ಉಳಿವು ಪ್ರತಿನಿಧಿಗಳ ಕೈಯಲ್ಲಿದೆ. ಕುಟುಂಬದ ಆರ್ಥಿಕ ರಕ್ಷಣೆಗಾಗಿ ಪ್ರತಿಯೊಬ್ಬರು ಎಲ್ಐಸಿ ವಿಮೆ ಖರೀದಿಸಬೇಕು ಎಂದು ಸಲಹೆ ನೀಡಿದರು.
ಉಡುಪಿ ವಿಭಾಗದ ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್, ಕ್ಲಿಯಾ ವ್ಯವಸ್ಥಾಪಕ ಪ್ರಮೋದ್ ,ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್, ಪಾಂಡುರಂಗ, ಶ್ರೀನಿವಾಸ್, ಟಿ.ಕೆ.ಶಿವಕುಮಾರ್, ಪ್ರತಿನಿಧಿ ಎಂ.ಮುರುಳಿ, ಸೀಗೇಹಡ್ಲು ಹರೀಶ್ ಇದ್ದರು.