ಬೆಂಬಲ ಬೆಲೆಯಡಿ ಶೇಂಗಾ ಖರೀದಿಸಿ

GROUNDNUT
Published on

ಲಕ್ಷ್ಮೇಶ್ವರ: ಸರ್ಕಾರದ ಬೆಂಬಲ ಬೆಲೆ ಖರೀದಿ ಯೋಜನೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆ ಬಂದ್ ಆಗಿದ್ದು ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ರೈತರು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

ಕೃಷಿಕ ಸಮಾಜ ನವದೆಹಲಿ ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮತ್ತು ಮಾಡಳ್ಳಿಯ ರೈತ ಮುಖಂಡ ಸುರೇಶ ಸಿಂದಗಿ ಮಾತನಾಡಿ ಜಿಲ್ಲೆಯಲ್ಲಿ 1464 ರೈತರು ಶೇಂಗಾ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಸರ್ಕಾರ 15ದಿನಗಳಿಂದ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ಬಂದ್ ಮಾಡಿದ್ದರಿಂದ ರೈತರು ಕೇಂದ್ರದ ಮುಂದೆ ಕಾಯುತ್ತಿದ್ದಾರೆ. ಖರೀದಿ ಕೇಂದ್ರಕ್ಕೆ ತಂದಿಟ್ಟ ಶೇಂಗಾ ಚೀಲಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಖರೀದಿ ಕೇಂದ್ರದವರು ಹೇಳುತ್ತಿದ್ದಾರೆ. 15-20 ದಿನಗಳಿಂದ ಕಾಯ್ದಿಟ್ಟ ಶೇಂಗಾ ತೂಕದಲ್ಲಿಯೂ ಕಡಿಮೆಯಾಗುವುದಲ್ಲದೆ, ಇವುಗಳನ್ನು ತರಲು ಹಾಗೂ ಮತ್ತೆ ಹಿಂದಿರುಗಿ ತೆಗೆದುಕೊಂಡು ಹೋಗಲು ರೈತರಿಗೆ ಸಾಕಷ್ಟು ಹಾನಿಯಾಗಲಿದೆ. ಜಿಲ್ಲಾಧಿಕಾರಿಗಳು ಕೂಡಲೇ ಶೇಂಗಾ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು, ಕಡಲೆ ಬೆಳೆ ಖರೀದಿ ಕೇಂದ್ರದ ಲಾಗಿನ್ ಓಪನ್ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯವಾಗಿ ಈ ಬಾರಿ ರೈತರಿಗೆ ಬೆಳೆಹಾನಿ, ಬೆಳೆವಿಮೆ ಮಧ್ಯಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ವಿಮಾ ಕಂಪನಿಯಿಂದ ಹಾಗೂ ಇಲಾಖೆಯಿಂದ ಯಾವುದೇ ಉತ್ತರ ದೊರಕುತ್ತಿಲ್ಲ ಎಂದು ಆರೋಪಿಸಿದರು.

ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಫೆ.11ರಂದು ಲಕ್ಷ್ಮೇಶ್ವರದಲ್ಲಿ ಕೃಷಿ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುತ್ತದೆ. ಮತ್ತು ಈ ಕುರಿತು ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿ ಅವರ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ಅವರಿಗೂ ರೈತರು ಮನವಿ ಸಲ್ಲಿಸಿದರು.

ರೈತರಾದ ಟಾಕಪ್ಪ ಸಾತಪುತೆ, ಚನ್ನಬಸಪ್ಪ ಲಿಂಗಶೆಟ್ಟಿ, ಸಿದ್ರಾಮಗೌಡ ಸಾಲ್ಮನಿ, ಸುಧೀರಗೌಡ ಸಾಲ್ಮನಿ, ಉದಯ ಹೂಗಾರ, ಮಂಜುನಾಥ ಕಳಸದ, ಕುಬೇರಪ್ಪ ಕುರಿ, ಮಂಜುನಾಥ ರಾಚನಗೌಡ್ರ, ಹನುಮಂತಪ್ಪ ಚಿಂಚಲಿ, ಈರಬಸಪ್ಪ ಜಿಡ್ಡಿಯವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net