

ನರಗುಂದ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ವಿವಿಧ ಉತ್ಪನ್ನಗಳ ಖರೀದಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ಗದಗನಲ್ಲಿ ಗುರುವಾರ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ನರಗುಂದ ತಾಲೂಕಿನಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ ಕೇವಲ 15 ದಿನಗಳಲ್ಲಿ ಕಟಾವಿಗೆ ಬರುತ್ತದೆ. ರೋಣ ಹಾಗೂ ಗಜೇಂದ್ರಗಡದಲ್ಲಿ ಕುಸುಬೆ ಮತ್ತು ಕಡಲೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಶೇಂಗಾ ಮತ್ತು ಕಡಲೆ. ಮುಂಡರಗಿಯಲ್ಲಿ ಭತ್ತ, ಶೇಂಗಾ, ಕಡಲೆ ಮುಂತಾದ ಬೆಳೆಗಳನ್ನು ಬೆಳೆಯಲಾಗಿದೆ. ಗದಗ ತಾಲೂಕಿನಲ್ಲಿ ಕುಸುಬೆ, ಕಡಲೆ ಬೆಳೆಗಳನ್ನು ಬೆಳೆಯಲಾಗಿದ್ದು, ಈ ಎಲ್ಲ ಧವಸ ಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ರೈತರು ಅಪಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲಬಾಧೆಗೆ ತುತ್ತಾಗುತ್ತಿದ್ದಾರೆ.
ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಗದಗ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಹಿಂದೆ ನಿಗಧಿಪಡಿಸಿದ್ದ ಗರಿಷ್ಠ 10 ಕ್ವಿಂಟಾಲ್ ಬದಲಾಗಿ ಪ್ರತಿಯೊಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಉತ್ಪನ್ನ ಖರೀದಿಸಲು ಅವಕಾಶ ಕಲ್ಪಿಸಿಕೊಡಬೇಕು. ತಡವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವುದಿಲ್ಲ. ಹೀಗಾಗಿ ನಿಗದಿತ ಸಮಯದಲ್ಲಿ ಬೆಂಬಲಬೆಲೆ ಖರೀದಿ ಕೇಂದ್ರಗಳನ್ನು ತೆರೆದು ರೈತರ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿಂಕೆ ಹಾವಳಿ: ಲಕ್ಷ್ಮೇಶ್ವರ ತಾಲೂಕಿನಲ್ಲಿ ಚಿಗರಿಗಳ ಹಾವಳಿಯಿಂದ ರೈತರು ಬೆಳೆದ ಬಹುತೇಕ ಬೆಳೆಗಳು ಸಂಪೂರ್ಣ ಹಾನಿಗೊಳ್ಳುತ್ತಿವೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪ್ರಸ್ತುತ ಈಗಾಗಲೇ ಜಿಂಕೆ ಹಾವಳಿಯಿಂದ ಹಾನಿಗೊಂಡಿರುವ ರೈತರ ಬೆಳೆ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ, ಜಗದೀಶ ಸಂಕನಗೌಡ್ರ, ಎಸ್.ಎಂ. ಪಾಟೀಲ, ಡಿ.ಆರ್. ಪಾಟೀಲ, ರವಿಕುಮಾರ ಮ್ಯಾಗೇರಿ, ವಿವೇಕ ಮೋರೆ, ಗಂಗಾಧರ, ಉಮೇಶಗೌಡ ಪಾಟೀಲ, ರಾಜಶೇಖರಗೌಡ ಪಾಟೀಲ, ಈರಣ್ಣ ಹಂಚಿನಾಳ, ಟಾಕಪ್ಪ ಸಾತಪುತೆ, ಮಲ್ಲನಗೌಡ ಪಾಟೀಲ, ನಾಗೇಶ ಅಪ್ರೋಜಿ, ದೇವರಾಜ ದೇಸಾಯಿ, ವಿಠಲ ಮುಧೋಳೆ, ಮುತ್ತು ಯಲಿಗಾರ, ರವಿ ಹಡಪದ, ಅಜಯ ಕರಿಗೌಡ್ರ, ಚಂದ್ರಗೌಡ ಕರಿಗೌಡ್ರ ಇತರರಿದ್ದರು.