

ವಿಜಯಪುರ: ಸಶಸ್ತ್ರ ಪಡೆಗಳ ಧ್ವಜ ಖರೀದಿಸುವ ಮೂಲಕ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಸಲುವಾಗಿ ಹಮ್ಮಿಕೊಂಡ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಗಳಿಗೆ ಪ್ರೋತ್ಸಾಹಿಸಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಾರ್ವಜನಿಕರಲ್ಲಿ ವಿನಂತಿಸಿದರು.
ನಗರದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ 2024ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ 1971ನೇ ಯುದ್ಧ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದೆಲ್ಲೆಡೆ ಪ್ರತಿ ವರ್ಷ ಡಿ. 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನ ಆಚರಿಸಾಗುತ್ತದೆ. ಈ ಸಂದರ್ಭ ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಗುತ್ತದೆ. ವೀರ ಯೋಧರ ಕುಟುಂಬಕ್ಕೆ ಬೆಂಬಲ ಒದಗಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಧಿಯನ್ನು ಯುದ್ಧ ಸಂತ್ರಸ್ತರಿಗೆ, ಮಾಜಿ ಸೈನಿಕರು ಅವರ ಅವಲಂಬಿತರ ಸಲುವಾಗಿ ಹಮ್ಮಿಕೊಂಡ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ. ಸಾರ್ವಜನಿಕರು ಧ್ವಜ ಖರೀದಿಸುವ ಮೂಲಕ ದೇಶದ ಸೈನಿಕರಿಗೆ ಬೆಂಬಲಿಸಬೇಕು ಎಂದರು.
ನಿಧಿ ಸಂಗ್ರಹದಲ್ಲಿ ಜಿಲ್ಲೆ ಸಾಧನೆ ಮಾಡಿದ್ದರಿಂದ ಡಿ.7ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಲಾಯಿತು. ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಟುಂಬಗಳಿಗೆ ಜಿಲ್ಲಾ ಮಟ್ಟದಲ್ಲಿ ಸೈನಿಕ ಕಲ್ಯಾಣ ಇಲಾಖೆಯು ಬಹಳಷ್ಟು ಕೆಲಸ ನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಯೋಧರ ಹಾಗೂ ಅವರ ಕುಟುಂಬದ ದೃಷ್ಟಿಯಿಂದ ಇನ್ನೂ ರೂಪುರೇಷೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಬೇಕು. ಸೇವಾನಿರತರು ಹಾಗೂ ನಿವೃತ್ತ ಯೋಧರು ಹಾಗೂ ಅವರ ಅವಲಂಬಿತ ಕುಟುಂಬದವರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಕರ್ನಲ್ ಫಿರೋಜ್ ಬಿ ಕರ್ಲೆಕರ್ ಮಾತನಾಡಿ, ಹದಿಮೂರು ದಿನಗಳ ಕಾಲ ನಡೆದ 1971ರ ಯುದ್ಧವು ಭಾರತೀಯ ಸೇನಾಪಡೆಯ ಮೈಲುಗಲ್ಲಾಗಿದೆ ಎಂದರು.
ಜಿಪಂ ಸಿಇಒ ರಿಷಿ ಆನಂದ, ಸೈನಿಕ ಶಾಲೆಯ ಪ್ರಾಂಶುಪಾಲೆ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್, ಎಎಸ್‌ಪಿ ಶಂಕರ ಮಾರಿಹಾಳ, 36 ಕರ್ನಾಟಕ ಎನ್‌ಸಿಸಿಯ 36ನೇ ಬಟಾಲಿಯನ್ ಅಧಿಕಾರಿ ಕರ್ನಲ್ ಗಿರೀಶ ಶಿಂದೆ, ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಸ್ಕ್ವಾಡ್ರನ್ ಲೀಡರ್ ಜಿ.ಆರ್. ವಿನೂತ, ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ಬಾಗೇವಾಡಿ, ಕೆಕೆಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, 1971ರ ಯುದ್ಧದಲ್ಲಿ ಭಾಗವಹಿಸಿದ ಯೋಧರಾದ ಮುಲ್ಲಾ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಪ್ಪ ಹಾಗೂ ಪದಾಧಿಕಾರಿ ಶಿವಗಂಗಾಬಾಯಿ ಸೇರಿದಂತೆ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.
1971ರ ಯುದ್ಧದಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಎರಡು ನಿಮಿಷ ಮೌನಾಚರಿಸಲಾಯಿತು. ಧ್ವಜ ನಿಧಿ ಸಂಗ್ರಹಣೆಗೆ ಸಹಕಾರ ನೀಡಿದ ವಿವಿಧ ಇಲಾಖೆ ಹಾಗೂ ಜಿಲ್ಲೆಯ ಮಾಜಿ ಸೈನಿಕರ ಸಂಘಕ್ಕೆ ಪ್ರಶಂಸೆ ಪತ್ರ ವಿತರಿಸಲಾಯಿತು. ಕಾಯಕ್ರಮದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡವು.