ಜ್ಞಾನ ಹೆಚ್ಚಿಸಿಕೊಳ್ಳಲು ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ: ಶಾಸಕ ಟಿ.ಎಸ್.ಶ್ರೀವತ್ಸ

19
Published on

ಮೈಸೂರು: ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವ ಜತೆಗೆ ಭಾಷಾ ಪ್ರೇಮ ಮೆರೆಯಲು ಎಲ್ಲರೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಸಂದೀಪ್ ಸ್ನೇಹ ಬಳಗದಿಂದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಆರ್.ಚಂದ್ರಶೇಖರ್ ಅವರ 20ನೇ ವರ್ಷದ ನೆನಪಿನಾರ್ಥ ಕನ್ನಡ ಪತ್ರಿಕೆಗಳ ಓದುವ ವಾಚನಾಲಯ, ಕನ್ನಡ ಬೆಳೆಸಿ ಕನ್ನಡ ಉಳಿಸಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಕನ್ನಡ ದಿನಪತ್ರಿಕೆ ಓದಲು ಪ್ರತಿಯೊಬ್ಬರೂ ದಿನದಲ್ಲಿ ಒಂದಷ್ಟು ಸಮಯ ಮೀಸಲಿಡಬೇಕು. ಇದರಿಂದ ಜ್ಞಾನ ಪಡೆದುಕೊಳ್ಳುವ ಜತೆಗೆ ಭಾಷಾ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.

ದಸರಾ ವಸ್ತುಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ನಾಗರಿಕರು ಮತ್ತು ಮಳಿಗೆದಾರರು ವ್ಯಾಪಾರಸ್ಥರಲ್ಲಿ ಪ್ರತಿದಿನ ಕನ್ನಡ ಪತ್ರಿಕೆಗಳನ್ನು ಓದಿಸುವ ಅಭ್ಯಾಸ ಮಾಡಬೇಕು. ಇದರಿಂದ ಭಾಷಾಭಿಮಾನ ಮತ್ತು ಸಾಮಾಜಿಕ ಜ್ಞಾನ ಮೂಡಿಸಲು ನೆರವಾಗುತ್ತದೆ ಎಂದರು.

ಕನ್ನಡ ಪತ್ರಿಕೋದ್ಯಮಕ್ಕೆ ಪ್ರೋತ್ಸಾಹ ನೀಡಲು ದಸರಾ ವಸ್ತುಪ್ರದರ್ಶನದಲ್ಲಿ ನಿರಂತರವಾಗಿ ಕನ್ನಡ ಪತ್ರಿಕೆಗಳ ವಾಚನಾಲಯ ಪ್ರಾರಂಭಿಸಿರುವುದು ಅರ್ಥಪೂರ್ಣವಾದುದು, ಶಿಕ್ಷಣ, ಉದ್ಯಮ, ಆಹಾರ, ಆರೋಗ್ಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಸರ್ಕಾರದ ಕಾರ್ಯಕ್ರಮಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಪರಿಸರ ಸೇರಿದಂತೆ ಸಾಕಷ್ಟು ವಿಷಯಗಳು ಒಂದು ಪತ್ರಿಕೆಯಲ್ಲಿ ನಿಮಗೆ ಮಾಹಿತಿ ಸಿಗುತ್ತದೆ. ಹಾಗಾಗಿ ಕನ್ನಡ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಪ್ರತಿಯೊಬ್ಬರೂ ಪಾಲಿಸಿ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಕನ್ನಡ ದಿನಪತ್ರಿಕೆಗಳ ಪಾತ್ರ ಸ್ವತಂತ್ರೃ ಪೂರ್ವದಲ್ಲೂ ಇದ್ದು, ಹಿರಿಯ ಹೋರಾಟಗಾರರ ಭಾಷಣವನ್ನು ಮನೆ, ಮನೆಗೆ ತಲುಪಿಸಲು ಆಸರೆಯಾಗಿದ್ದು ಶ್ಲಾಘನೀಯ ಎಂದರು.

ಎಷ್ಟೇ ದೃಶ್ಯವಾಹಿನಿ, ಡಿಜಿಟಲ್ ಮೀಡಿಯಾ ಬಂದರೂ ಕನ್ನಡ ಪತ್ರಿಕೆಗಳಿಗೆ ತನ್ನದೇ ಆದ ಓದುಗರ ಬಳಗ ಮೌಲ್ಯತೆ ಶಕ್ತಿಯಿದೆ. ಸರ್ಕಾರದ ಆಡಳಿತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿದೆ. ಆದರೆ ಕೆಲವು ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಅದು ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ಕರ್ನಾಟಕ ಎಂದು ನಾಮಕರಣವಾಗಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂಧರ್ಭದಲ್ಲಿ ಕನ್ನಡದ ಪತ್ರಿಕೋದ್ಯಮವನ್ನು ಬೆಳೆಸಲು ಸರ್ಕಾರದ ಇಲಾಖೆಗಳು ಯೋಜನೆ ರೂಪಿಸಲಿ ಎಂದು ಹೇಳಿದರು.

ಬಸವ ಬಳಗದ ಚಾಮುಂಡಿಪುರಂ ಅಧ್ಯಕ್ಷ ಸಂದೀಪ್ ಚಂದ್ರಶೇಖರ್, ಉಪಾಧ್ಯಕ್ಷ ವೆಂಕಟೇಶ, ಸಾರ್ವಜನಿಕ ಕುಂದು ಕೊರತೆ ವಿಭಾಗದ ಅಧ್ಯಕ್ಷ ಅಹಮದ್, ಪ್ರಾಧಿಕಾರ ವ್ಯವಸ್ಥಾಪಕ ವೆಂಕಟೇಶ್, ನಿರೂಪಕ ಅಜಯ್ ಶಾಸ್ತ್ರಿ, ಚಂದ್ರಶೇಖರ್ ಕುಟುಂಬ, ಸ್ನೇಹ ವರ್ಗದ ಗಾಯತ್ರಿ, ಸಂತೋಷ್, ಪಾರ್ವತಿ, ಸುರೇಶ್, ಆರ್.ಶಿವಶಂಕರ್‌ಸ್ವಾಮಿ, ಅಂಬಳೆ ಶಿವಣ್ಣ, ಶ್ರೀಧರ್ ಭಟ್, ಶಂಕರ್, ಪುರುಷೋತ್ತಮ್, ಶಿವಣ್ಣ, ಮಹೇಶ್, ಬಸವರಾಜು, ಕಿರಣ್, ವಿನಯ್, ಮಧುಸೂದನ್, ದೀಪಕ್, ಧನುಷ್, ರೂಪೇಶ್, ದೀಪಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net