ಜಾತಿ ನಿಂದನೆಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ

FotoJet (1)
Published on

ಅರಿವು ಕಾರ್ಯಕ್ರಮದಲ್ಲಿ ತಾಪಂ ಇಒ ಹೊನ್ನಯ್ಯ ಹೇಳಿಕೆ ಶೋಷಿತರ ರಕ್ಷಣೆಗಾಗಿಯೇ ಕಾಯ್ದೆ ಜಾರಿ

ಗೌರಿಬಿದನೂರು: ಯಾವುದೇ ಜಾತಿ ನಿಂದನೆ ಮಾಡಿದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂದು

ತಾಲೂಕು ಪಂಚಾಯಿತಿ ಇಒ ಜಿ.ಕೆ.ಹೊನ್ನಯ್ಯ ಹೇಳಿದರು.

ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಲಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗದ ಜಾತಿನಿಂದನೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ನೈಸರ್ಗಿಕವಾಗಿ ದೊರೆಯುವ ಎಲ್ಲವನ್ನೂ ಪಡೆಯುವ ಹಕ್ಕು ಎಲ್ಲರಿಗಿದೆ. ಸಮಾಜದಲ್ಲಿ ಎಲ್ಲರೂ ಸಮಾನರು. ಜಾತಿ, ಮೇಲು ಕೀಳು ಭಾವನೆ ತೋರದೆ ಸಹಬಾಳ್ವೆ ನಡೆಸಬೇಕು. ಇದೇ ಕಾರಣಕ್ಕೆ ಶೋಷಿತ ಸಮುದಾಯಗಳ ರಕ್ಷಣೆಗೆಂದು ಸರ್ಕಾರ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿದೆ. ಕಾಯ್ದೆ ಉಲ್ಲಂಘಿಸುವವರು ಕಾನೂನು ರೀತಿ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚೆನ್ನಪ್ಪ ಎಸ್. ಗೌಡ ನಾಯಕರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನ ಹಕ್ಕು ಕರ್ತವ್ಯಗಳಿವೆ. ಸಮಾನತೆಯಿಂದ ಬದುಕಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಬೀದಿ ನಾಟಕ ಸೇರಿ ವಿವಿಧ ರೀತಿ ಅರಿವು ಮೂಡಿಸಲಾಗುತ್ತಿದೆ ಎಂದರು. ವಕೀಲ ಎಚ್.ಎಲ್.ವಿ. ವೆಂಕಟೇಶ್ ಮಾತನಾಡಿ. ನವ ಸಮಾಜ ನಿರ್ಮಾಣದ ಆಶಯ ಹೊಂದಿದ್ದ ಬುದ್ದ, ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧಿ ಅವರಂತಹ ಮಹಾನ್ ಮಾನವತಾವಾದಿಗಳು ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆ ಹೋಗಲಾಡಿಸಲು ಜಾಗೃತಿ ಮೂಡಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ ಹೆಸರಿನಲ್ಲಿ ದೌರ್ಜನ್ಯ ಹೆಚ್ಚುತ್ತಿದ್ದು, ಇವುಗಳಿಗೆ ಕಾನೂನಿನಲ್ಲಿ ಕಠಿಣ ಕ್ರಮ

ಜರುಗಿಸುವ ಅಗತ್ಯವಿದೆ ಎಂದರು.

ಪಿಎಸ್‌ಐ ಲಲಿತಮ್ಮ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವ್ಯವಸ್ಥಾಪಕಿ ಮೂಕಾಂಬಿಕಾ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಡಾ. ರತ್ನಮ್ಮ, ವೇಲೂರು ಮಂಜುನಾಥ್, ಮುನಿ ವೆಂಕಟಸ್ವಾಮಿ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net