

ವಿಜಯವಾಣಿ ಸುದ್ದಿಜಾಲ, ಸುಳ್ಯ
ಒಂದೊಮ್ಮೆ ಸಾಂಪ್ರದಾಯಿಕ ಬಳ್ಳಿ ಹಾಗೂ ಬೆತ್ತದಿಂದ ತಯಾರಿಸಿದ ಬುಟ್ಟಿಗಳಿಗೆ ಬೇಡಿಕೆ ಬಹಳಷ್ಟಿದ್ದರೂ ಮಾರುಕಟ್ಟೆಗೆ ಪ್ಲಾಸ್ಟಿಕ್ ಬುಟ್ಟಿಗಳ ಪ್ರವೇಶದ ಬಳಿಕ ಬೇಡಿಕೆ ಕುಂಠಿತಗೊಂಡಿದೆ. ಹಾಗಿದ್ದರೂ ಹಲವು ದಶಕಗಳಿಂದ ನೆರೆಯ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಕೊರಗ ಕುಟುಂಬವೊಂದು ಬುಟ್ಟಿ ಹೆಣೆದೇ ಬದುಕು ಕಟ್ಟಿಕೊಂಡಿದೆ.
ಕೇರಳ ಹಾಗೂ ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಅಲ್ಲಿಂದ ಬುಟ್ಟಿಗೆ ಬೇಕಾಗುವ ಎಂಜಿರು ಬಳ್ಳಿಗಳನ್ನು ಸಂಗ್ರಹಿಸಿ ಬುಟ್ಟಿ ಹೆಣೆದೇ ತುತ್ತಿನ ಚೀಲ ತುಂಬಿಸುತ್ತಿರುವವರು ಬದಿಯಡ್ಕದ ನೀರ್ಚಾಲಿನ ಕೊರಗ ಕುಟುಂಬದ ಸದಸ್ಯ ಗೋಪಾಲಕೃಷ್ಣ. ತನ್ನ ಮಾವ ರಾಘವ ಎಂಬುವರೊಂದಿಗೆ ಕಾಸರಗೋಡು, ಪುತ್ತೂರು ಸುಳ್ಯ, ಆಲೆಟ್ಟಿ ಪಾಣತ್ತೂರು ಭಾಗಗಳಿಗೆ ಸಂಚರಿಸಿ ಕಾಡುಗಳಿಂದ ಬಳ್ಳಿ ಸಂಗ್ರಹಿಸಿ ಬುಟ್ಟಿ ಹೆಣೆಯುವುದು ಇವರ ಕಸುಬು.
ಮೊದಲೆಲ್ಲಾ ಹೆಣೆದ ಬುಟ್ಟಿಗಳಿಗೆ ಬೇಡಿಕೆ ಬಹಳಷ್ಟಿತ್ತು. ಕೃಷಿ ಚಟುವಟಿಕೆಗಳಾದ ಗೊಬ್ಬರ ಹೊರುವುದು, ಬೆಳೆದ ಬೆಳೆಗಳನ್ನು ಸಾಗಿಸಲು ಈ ರೀತಿಯ ಬುಟ್ಟಿಗಳೇ ಬಳಕೆಯಾಗುತ್ತಿದ್ದವು. ಯಾವಾಗ ಮಾರುಕಟ್ಟೆಗೆ ಪ್ಲಾಸ್ಟಿಕ್ ಬುಟ್ಟಿಗಳು ಲಗ್ಗೆಯಿಟ್ಟವೋ ಆ ಬಳಿಕ ಸಾಂಪ್ರದಾಯಿಕ ಬುಟ್ಟಿಗಳಗೆ ಬೇಡಿಕೆ ಕ್ಷೀಣಿಸಿತು. ಜಾತ್ರೋತ್ಸವ, ಮದುವೆ ಮುಂತಾದ ಸಭೆ ಸಮಾರಂಭಗಳ ವೇಳೆ ಭೋಜನಾಲಯಗಳಲ್ಲಿ ಅನ್ನ ಹಾಕಲು ಹೆಚ್ಚಾಗಿ ಸಾಂಪ್ರದಾಯಿಕ ಬುಟ್ಟಿಗಳನ್ನೇ ಬಳಸಲಾಗುತ್ತದೆ. ಹೀಗಾಗಿ ಇಷ್ಟಾದರೂ ಬೇಡಿಕೆ ಇದೆ.
ಹೆಣೆದ ಬುಟ್ಟಿಗೆ ಕೆಲವೊಮ್ಮೆ ರಸ್ತೆ ಬದಿಯೇ ಬೇಡಿಕೆ ಬರುತ್ತದೆ. ಇಲ್ಲದಿದ್ದರೆ ಸನಿಹದ ಯಾವುದಾದರೂ ಪೇಟೆಗೆ ಹೋಗಿ ಅಂಗಡಿಯಲ್ಲಿ ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಗೋಪಾಲಕೃಷ್ಣ.
ಗಂಟೆಗೊಂದು ಕುಕ್ಕೆ ರೆಡಿ
ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಕಾಡಿನೊಳಕ್ಕೆ ಹೋಗಿ ಅದಕ್ಕೆಂದೇ ಇರುವ ಬಳ್ಳಿಯನ್ನು ಸಂಗ್ರಹಿಸಿ ರಸ್ತೆ ಬದಿ ಕುಳಿತು ಚಕಚಕನೆ ಬುಟ್ಟಿ ಹೆಣೆಯುವುದು ಇವರ ಕಾಯಕ. ಬಳ್ಳಿ ಸಂಗ್ರಹಿಸಿ ಬುಟ್ಟಿ ಹೆಣೆಯಲು ಕುಳಿತರೆ ಗಂಟೆಯೊಂದಕ್ಕೆ ಒಂದು ಬುಟ್ಟಿಯನ್ನು ಇವರು ಹೆಣೆಯುತ್ತಾರೆ. ದಿನವೊಂದಕ್ಕೆ ಕನಿಷ್ಠ ಮೂರು ಬುಟ್ಟಿ ಹೆಣೆದರೆ ಜೀವನ ಸಾಗಿಸಬಹುದಷ್ಟೇ ಎನ್ನುವ ಇವರು ದಿನದ ಕಸುಬು ಮುಗಿದ ಬಳಿಕ ಯಾವುದಾದರೂ ಅಂಗಡಿಯ ಮುಂಭಾಗದಲ್ಲಿ ರಾತ್ರಿ ಕಳೆದು ಬೆಳಗು ಮಾಡುತ್ತಾರೆ. ಒಮ್ಮೆ ಕಸುಬಿಗೆಂದು ಮನೆ ಬಿಟ್ಟು ಹೊರಟರೆ ಮತ್ತೆ ಮನೆ ಸೇರುವುದು ವಾರದ ಬಳಿಕವೇ.
ಕಾಡಿಗೆ ಹೋಗಿ ಬಳ್ಳಿಗಳನ್ನು ಸಂಗ್ರಹಿಸುವುದೇ ಈಗ ಸಾಹಸದ ಕೆಲಸ. ಆನೆ, ಚಿರತೆ ಮುಂತಾದ ಕಾಡುಪ್ರಾಣಿಗಳ ಹೆದರಿಕೆಯಲ್ಲೇ ಬಳ್ಳಿ ಅರಸಲು ಹೋಗಬೇಕಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಬುಟ್ಟಿಗೆ 350ರಿಂದ 400 ರೂ. ಇದ್ದರೂ ನಾವು ಮಾರಾಟ ಮಾಡುವುದು ಮಾತ್ರ 300 ರೂ.ಗೆ. ಅದನ್ನೂ ಕೊಡದೆ ಚೌಕಾಸಿ ಮಾಡುವವರೂ ಇದ್ದಾರೆ. ಗೋಪಾಲಕೃಷ್ಣ, ಬುಟ್ಟಿ ಹೆಣೆಯುವವರು https://www.vijayavani.net/handing-over-the-fallen-cash-to-the-heirs https://www.vijayavani.net/anniversary-of-ramakunjeshwar-universities