

ಯೋಗೇಶ್ ಮೇಟಿಕುರ್ಕಿ ಹೊಸದುರ್ಗ
ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಸೋಮವಾರ ಐತಿಹಾಸಿಕ ಶ್ರೀ ಕಂಚಿವರದರಾಜ ಸ್ವಾಮಿಯ ಉತ್ತರೆ ಮಳೆ ಅಂಬಿನೋತ್ಸವದ ಅಂಗವಾಗಿ ಬುತ್ತಿ ಬಾನದ ಮೆರವಣಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಉತ್ತರೆ ಮಳೆ ಅಂಬಿನೋತ್ಸವಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಭಾನುವಾರ ರಾತ್ರಿ ಬುತ್ತಿಬಾನ ಸೇವೆಯನ್ನು ಮಾಡಲಾಯಿತು.
ಸಂಪ್ರದಾಯದಂತೆ 16 ಸೇರು ಅಕ್ಕಿ, ಮೊಸರು, ಈರುಳ್ಳಿ, ಬೆಳ್ಳುಳ್ಳಿ, ಹೆಸರು ಬೇಳೆ ಮತ್ತು ಕಡಲೆ ಬೇಳೆ ಇತರ ಸಾಮಾಗ್ರಿಗಳಿಂದ ತಯಾರಿಸಿದ ಮೊಸರು ಅನ್ನದ ಬುತ್ತಿ ಬಾನವನ್ನು ಸಿದ್ದಪಡಿಸಲಾಯಿತು.
ಸೋಮವಾರ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಮಧ್ಯಾಹ್ನ ದೇವಾಲಯದಿಂದ ಹೊರಟ ಕಂಚೀವರದರಾಜಸ್ವಾಮಿ, ಉತ್ತರೆ ಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ಅರ್ಪಿಸುವ ಬುತ್ತಿಬಾನದೊಂದಿಗೆ ನೂರಕ್ಕೂ ಹೆಚ್ಚಿನ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅಂಬಿನೋತ್ಸವದ ಆಚರಣೆಗೆ ಕಳೆದ ಐದು ದಿನಗಳಿಂದ ಪಟ್ಟದ ಕತ್ತಿ ಹಿಡಿದು ಆಶ್ವಾರೂಢನಾಗಿ ದೇವಾಲಯದಲ್ಲಿ ಪಟ್ಟಕ್ಕೆ ಕುಳಿತಿದ್ದ ಕಂಚಿ ವರದರಾಜಸ್ವಾಮಿ
ಉತ್ಸವ ಮೂರ್ತಿ ದೇಗುಲದಿಂದ ಹೊರಬಂದ ಕೂಡಲೇ ಭಕ್ತರು ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ತೂರುವ ಮೂಲಕ ಭಕ್ತಿ ಸಮರ್ಪಿಸಿದರು.
ದೇವಾಲಯ, ಮಹಾಧ್ವಾರ ಹಾಗೂ ದೇವರ ಉತ್ಸವ ಸಾಗುವ ಮಾರ್ಗವನ್ನು ತಳಿರು, ತೋರಣ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.
ಮಂಗಳವಾರ ಅಂಬಿನೋತ್ಸವದ ಆಚರಣೆಯಂತೆ ದಶರಥ ರಾಮೇಶ್ವರ ವಜ್ರದಲ್ಲಿ ಕಂಚೀ ವರದರಾಜ ಸ್ವಾಮಿಯ ಗಂಗಾಸ್ನಾನ ಹಾಗೂ ನಾಮಧಾರಣೆ ಮಹೋತ್ಸವ, ಅನ್ನಸಂತರ್ಪಣೆ ನೆರವೇರಲಿದೆ.
ಕಠಿಣ ವ್ರತ: ದುರ್ಗಮ ಅರಣ್ಯ ಪ್ರದೇಶವಾಗಿರುವ ಉತ್ತರೆ ಬೆಟ್ಟದಲ್ಲಿ ರಾತ್ರಿ ವೇಳೆಯಲ್ಲಿ ಯಾವುದೇ ದೀಪದ ಬೆಳಕು ಬಳಸದಂತೆ ಬೆಟ್ಟವನ್ನು ಹತ್ತಬೇಕು.
ಅಂಬು ಹೊಡೆದ ನಂತರ ವರದರಾಜ ಸ್ವಾಮಿಯೊಂದಿಗೆ ಭಕ್ತರು ಮಂಗಳವಾರ ದಶರಥ ರಾಮೇಶ್ವರ ಸ್ವಾಮಿ ವಜ್ರಕ್ಕೆ ಮರಳುತ್ತಾರೆ.
ಜಣಜಣ ಕಾಂಚಾಣ: ಕಾಂಚಾಣ ಪ್ರಿಯ ಕಂಚೀವರದರಾಜ ಸ್ವಾಮಿಯ ಮೇಲೆ ದುಡ್ಡಿನ ಸುರಿ ಮಳೆಯನ್ನು ಭಕ್ತರು ಸುರಿಸಿದರು.
ಬೊಗಸೆ ತುಂಬಾ ನಾಣ್ಯ ತುಂಬಿಕೊಂಡು ದೇವರ ಉತ್ಸವ ಮೂರ್ತಿ ಮೇಲೆ ತೂರುತ್ತಿದ್ದರೇ ಕೆಲವರು ವಸ್ತ್ರವನ್ನು ದೇವರ ಸುತ್ತ ಹಿಡಿದು ಹಣ ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂತು. ಜಾತ್ರೆಯ ತುಂಬಾ ಜನರ ಸದ್ದಿಗಿಂತ ನಾಣ್ಯದ ಶಬ್ದವೇ ತುಂಬಿ ಹೋಗಿತ್ತು.