ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

Buttermilk for an elephant's stomach
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಗಾದೆ ಮಾತು ದುಬಾರೆ ಆನೆ ಶಿಬಿರದ ಸಾಕಾನೆಗಳ ಪಾಲಿಗೆ ಅಕ್ಷರಶಃ ಸತ್ಯ ಎನ್ನುವಂತಾಗಿದೆ. ಸುಡು ಬಿಸಿಲಿನಿಂದಾಗಿ ಕಾಡಿನಲ್ಲಿ ಹಸಿರು ಮಾಯವಾಗಿದ್ದು, ಆನೆಗಳ ಹೊಟ್ಟೆ ತುಂಬುವಷ್ಟು ಆಹಾರ ಅರಣ್ಯದಲ್ಲಿ ಸಿಗುತ್ತಿಲ್ಲ. ಮಾವುತರು ಬೇಯಿಸಿ ಹಾಕುವ ಹಿಟ್ಟು ಮಾತ್ರ ಈಗ ಇವುಗಳ ಪಾಲಿಗೆ ಅಮೃತ ಸಮಾನವಾಗಿದೆ.
ಕುಶಾಲನಗರ ತಾಲೂಕಿನಲ್ಲಿ ಇರುವ ದುಬಾರೆ ಸಾಕಾನೆ ಶಿಬಿರ ಜಗತ್ಪçಸಿದ್ಧ ಪ್ರವಾಸಿತಾಣವಾಗಿದೆ. ದೇಶ-ವಿದೇಶಗಳಿಂದ ಇಲ್ಲಿಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ತುಂಬಿ ಹರಿಯುವ ಕಾವೇರಿ ನದಿಯನ್ನು ದೋಣಿಗಳ ಮೂಲಕ ಕ್ರಮಿಸಿ ಸಾಕಾನೆಗಳ ಚಟುವಟಿಕೆ ಕಣ್ತುಂಬಿಸಿಕೊಳ್ಳುವುದು ಒಂದು ವಿಶೇಷ ಅನುಭವ. ಆನೆಗಳನ್ನು ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ಕೊಡುವುದಕ್ಕೂ ಪ್ರವಾಸಿಗರಿಗೆ ಇಲ್ಲಿ ಅವಕಾಶವಿದೆ.

ಆದರೆ ಈಗ ದುಬಾರೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಯಾವಾಗಲೂ ತುಂಬಿ ಹರಿಯುತ್ತಿದ್ದ ಕಾವೇರಿ ನದಿ ಖಾಲಿ ಖಾಲಿ. ನೀರು ಇರಬೇಕಿದ್ದ ಜಾಗದಲ್ಲಿ ಬರೀ ಭಾರಿ ಗಾತ್ರದ ಬಂಡೆಕಲ್ಲುಗಳು ಮಾತ್ರ ಕಂಡುಬರುತ್ತಿದೆ. ದೋಣಿಗಳು ದಡ ಸೇರಿವೆ. ಆನೆಗಳನ್ನು ಸ್ನಾನ ಮಾಡುವ ಜಾಗದ ಹಳ್ಳಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಕಂಡುಬರುತ್ತಿದ್ದು, ಪರಿಸ್ಥಿತಿ ಇನ್ನು ಒಂದು ವಾರ ಹೀಗೆಯೇ ಮುಂದುವರಿದರೆ ಇಲ್ಲೂ ನೀರು ಬತ್ತಿಹೋಗಲಿದೆ.

ದುಬಾರೆ ಆನೆ ಶಿಬಿರದ ಆನೆಗಳನ್ನು ನದಿಯಲ್ಲಿ ಸ್ನಾನ ಮಾಡಿಸಿದ ನಂತರ ಮಾವುತರು ಬೇಯಿಸಿದ ಆಹಾರ ತಿನ್ನಿಸಿ ಹೆಚ್ಚಿನ ಮೇವಿಗಾಗಿ ಕಾಡಿನೊಳಕ್ಕೆ ಕಳುಹಿಸುವುದು ಇಲ್ಲಿಯ ಪರಿಪಾಟ. ಆದರೆ ಸಾಮಾನ್ಯವಾಗಿ ವರ್ಷ ಪೂರ್ತಿ ಹಸಿರಿನಿಂದ ಕೂಡಿರುತ್ತಿದ್ದ ದುಬಾರೆಯ ಅರಣ್ಯ ಈಗ ಬಹುತೇಕ ಒಣಗಿದೆ. ಕುರುಚಲು ಕಾಡು, ಹುಲ್ಲು ಬಣ್ಣ ಬದಲಿಸಿಕೊಂಡು ಮಣ್ಣಿನ ಬಣ್ಣಕ್ಕೆ ತಿರುಗಿದೆ. ಬಿದಿರು ಕೂಡ ಒಣಗಿ ನಿಂತಿದೆ.

ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆಯ ಮಳೆಯಾಗುವುದು ವಾಡಿಕೆ. ಆದರೆ ಈ ವರ್ಷ ಜನವರಿಯಿಂದ ಈಚೆಗೆ ಈ ವ್ಯಾಪ್ತಿಯಲ್ಲಿ ಮಳೆಯೇ ಬರಲಿಲ್ಲ. ಇದರ ಪರಿಣಾಮ ದುಬಾರೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದಾಗಿ ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ದುಬಾರೆಯ ಸಾಕಾನೆಗಳು ಮಾತ್ರವಲ್ಲದೆ ಈ ವ್ಯಾಪ್ತಿಯ ಕಾಡಾನೆಗಳೂ ಆಹಾರ ಸಿಗದೆ ಪರಿತಪಿಸುವಂತಾಗಿದೆ.

ಕಾಡಿನಲ್ಲಿ ಆಹಾರ ಸಿಗದ ಕಾರಣ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಪ್ರದೇಶದಲ್ಲಿ ಆನೆ ದಾಳಿ ಹೆಚ್ಚಾಗಲು ಇದು ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕೆಲವು ದಿನಗಳಿಂದ ವರದಿಯಾಗುತ್ತಿರುವ ಕಾಡಾನೆ ದಾಳಿ ಪ್ರಕರಣಗಳಲ್ಲಿ ಬಹುತೇಕ ಘಟನೆಗಳು ಆಹಾರ ಅರಸಿ ನಾಡಿಗೆ ಬಂದ ಕಾಡಾನೆಗಳಿಂದಲೇ ಸಂಭವಿಸಿವೆ ಎನ್ನಲಾಗುತ್ತಿದೆ.


ದುಬಾರೆ ಸಾಕಾನೆ ಶಿಬಿರಗಳಿಗೆ ಮಾವುತರು ಸಿದ್ಧಪಡಿಸಿದ ಆಹಾರ ಕೊಡುತ್ತಾರೆ. ಆನೆಗಳಿಗೆ ಅವುಗಳ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ಸರಾಸರಿ 50 ಕೆಜಿಯಷ್ಟು ಆಹಾರ ಬೇಕಾಗುತ್ತದೆ. ಭತ್ತ, ಭತ್ತದ ಹುಲ್ಲು, ಬೆಲ್ಲ, ಹುರುಳಿ, ಉಪ್ಪು ಸೇರಿಸಿ ತಯಾರಿಸಿದ ಆಹಾರವನ್ನು ತಯಾರಿಸಿ ಕೊಡಲಾಗುತ್ತದೆ. ಆನೆಗಳಿಗೆ ಇವು ಕೇವಲ ಸ್ನಾö್ಯಕ್ಸ್ ಇದ್ದಂತೆ. ಹೆಚ್ಚಿನ ಊಟ ಬೇಕೆಂದರೆ ಕಾಡಿನೊಳಗೆ ತಿರುಗಾಡಿ ಅಲ್ಲಿಯ ಹಸಿರು ಸೊಪ್ಪು, ಹುಲ್ಲು, ಬಿದಿರು ತಿನ್ನಬೇಕಾಗುತ್ತದೆ.


ಬೇಸಿಗೆ ಮಳೆ ಆಗದ ಕಾರಣದಿಂದ ಕಾಡಿನೊಳಗೆ ಎಲ್ಲಿಯೂ ಹಸಿರು ಆಹಾರ ಕಂಡುಬರುತ್ತಿಲ್ಲ. ಆನೆಗಳು ಹಸಿದುಕೊಂಡು ಅರೆಹೊಟ್ಟೆಯಲ್ಲಿ ಇರುವುದನ್ನು ನೋಡಲಾಗದ ಮಾವುತರು, ಕಾವಾಡಿಗರು ಕಾಡಿನೊಳಗೆ ಸುತ್ತಾಡಿ ಎತ್ತರದ ಮರಗಳನ್ನು ಹತ್ತಿ, ಹಸಿರು ಸೊಪು ಸಂಗ್ರಹಿಸಿ ತಂದು ತಮ್ಮ ಉಸ್ತುವಾರಿಯಲ್ಲಿ ಇರುವ ಆನೆಗಳ ಹೊಟ್ಟೆ ತುಂಬಿಸಲು ಪ್ರಯತ್ನ ನಡೆಸುವುದು ದುಬಾರೆಯಲ್ಲಿ ಕಂಡುಬರುತ್ತಿದೆ.

ಶುಕ್ರವಾರದ ಮಾಹಿತಿ ಪ್ರಕಾರ ಕುಶಾಲನಗರ ವ್ಯಾಪ್ತಿಯಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. 33-34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತಿದ್ದ ಉಷ್ಣಾಂಶ ಈ ವರ್ಷ ಸುಮಾರು 3-4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಹೆಚ್ಚಾಗಿರುವ ಈ ತಾಪಮಾನ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ಆನೆ ಸೇರಿದಂತೆ ಪ್ರಾಣಿಗಳ ಮೇಲೂ ಇದರ ಪರಿಣಾಮ ಆಗುತ್ತಿದೆ.

ದುಬಾರೆಯನ್ನು ಸುತ್ತುವರಿದಂತೆ ಹರಿಯುವ ಕಾವೇರಿ ನದಿ ತುಂಬಿ ಹರಿಯುತ್ತಿದ್ದರೆ ಈ ಭಾಗದಲ್ಲಿ ಹಸಿರು ಕಂಡುಬರುವುದರ ಜತೆಗೆ ತಂಪಿನ ಅನುಭವ ಆಗುತ್ತಿರುತ್ತದೆ. ಆದರೆ ಈಗ ನದಿಯಲ್ಲಿ ನೀರಿಲ್ಲ. ಬಂಡೆÀಕಲ್ಲುಗಳೇ ಕಂಡುಬರುತ್ತಿದ್ದು ಬಿಸಿಲಿನ ಝಳಕ್ಕೆ ಬಿಸಿಯಾಗುವ ಕಲ್ಲುಗಳಿಂದ ಇಲ್ಲಿಯ ವಾತಾವರಣವನ್ನು ಮತ್ತಷ್ಟು ಬಿಸಿಯೇರಿಸುತ್ತದೆ. ಇದರ ಪರಿಣಾಮ ಆನೆಗಳ ಮೇಲೂ ಕಂಡು ಬರುತ್ತಿದ್ದು, ಬಿಸಿ ಸಹಿಸಲಾಗದೇ ಏದುಸಿರು ಬಿಡುತ್ತಿವೆ.

ಜಿಲ್ಲೆಯಲ್ಲಿ ನಾಪೋಕ್ಲು ಭಾಗದಲ್ಲಿ ಮಾತ್ರ ಕಳೆದ 2 ದಿನ ಸಾಧಾರಣ ಮಳೆ ಆಗಿದೆ. ಜೋರಾದ ಮಳೆ ಕನಿಷ್ಠ ಒಂದು ವಾರ ಬಿಡದೇ ಸುರಿದರೆ ಮಾತ್ರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವ ನಿರೀಕ್ಷೆ ಇದೆ. ದುಬಾರೆ ಆನೆ ಶಿಬಿರದ ಆನೆಗಳೂ ನಿಟ್ಟುಸಿರು ಬಿಡಬಹುದು.

ಮಳೆಯಾಗದಿರುವುದರಿಂದ ಮನುಷ್ಯರಿಗೆ ಮಾತ್ರ ಸಮಸ್ಯೆ ಆಗಿಲ್ಲ. ಆನೆಗಳಿಗೂ ತೊಂದರೆ ಆಗುತ್ತಿದೆ. ಕಾಡಿನೊಳಗೆ ಹಸಿರು ಮಾಯವಾಗಿರುವುದರಿಂದ ನೈಸರ್ಗಿಕ ಆಹಾರ ಅಲ್ಲಿ ಅವುಗಳಿಗೆ ಸಿಗುತ್ತಿಲ್ಲ. ಸೊಪ್ಪು, ಹುಲ್ಲು, ಬಿದಿರು ಸಿಗದೆ ಆನೆಗಳು ಅರೆ ಹೊಟ್ಟೆಯಲ್ಲಿ ಇರುವಂತಾಗಿದೆ. ಇದನ್ನು ನೋಡಲಾಗದೆ ನಾವುಗಳು ಕಾಡಿನಿಂದ ಹಸಿರು ಸೊಪ್ಪು ತಂದು ಕೊಡುತ್ತಿದ್ದೇವೆ.
ಕುಮಾರ್, ‘ವನರಾಜ’ ಆನೆಯ ಮಾವುತ

2003, 2007ರ ನಂತರ ಈ ಪ್ರಮಾಣದ ಬಿಸಿಲು ಈ ವರ್ಷ ಕಂಡುಬರುತ್ತಿದೆ. ಕಾವೇರಿ ನದಿಯಲ್ಲಿ ಆ ಎರಡು ವರ್ಷಗಳಲ್ಲೂ ನೀರು ಹೀಗೆಯೇ ಬರಿದಾಗಿತ್ತು. 2018ರಲ್ಲೂ ಇಂಥ ಬಿಸಿಲು ಇತ್ತಾದರೂ ನದಿಯಲ್ಲಿ ಸ್ವಲ್ಪ ನೀರಿತ್ತು. ಈ ಹವಾಮಾನ ನಮಗೇ ಸಹಿಸಿಕೊಳ್ಳಲು ಆಗುತ್ತಿಲ್ಲ. ಆನೆಗಳ ಪಾಡು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ರತೀಶ್, ದುಬಾರೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net