ಮಳೆ ಹೆಚ್ಚಾಗಿ ಈರುಳ್ಳಿಗೆ ಮಜ್ಜಿಗೆ ರೋಗ ಭೀತಿ

26 BIRUR 02 (1)
Published on

ಬೀರೂರು: ಹೋಬಳಿಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಈರುಳ್ಳಿ ಬೆಳೆಗೆ ತೇವಾಂಶ ಹೆಚ್ಚಾಗಿದ್ದು ರೈತರಲ್ಲಿ ಯಲ್ಲಿ ಆತಂಕ ಮೂಡಿಸಿದೆ.
ಬೀರೂರು ಹೋಬಳಿಯ ಮುದ್ದಾಪುರ ಎರೆ ಬಯಲು, ಯರೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಪೈಕಿ 330 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಬಿತ್ತನೆಯಾಗಿದ್ದು, ಕಳೆದ ಎದಡು ತಿಂಗಳಿನಿಂದ ಎಡಬಿಡದೆ ಸುರಿದ ಮಳೆಗೆ ತೇವಾಂಶ ಹೆಚ್ಚಾಗಿ ರೈತರಲ್ಲಿ ಆತಂಕ ಮೂಡಿಸಿದೆ. ಬೆಳೆ ಉಳಿವಿಗೆ ರೈತರು ಯೂರಿಯಾದಂತಹ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಆದರೂ ತೇವಾಂಶ ಹೆಚ್ಚಾದ ಕಾರಣ ಈರುಳ್ಳಿ ಬೆಳೆಗೆ ಕೊಳೆ, ಮಜ್ಜಿಗೆಯಂತಹ ವಿವಿಧ ರೋಗಗಳಿಗೆ ತುತ್ತಾಗಿದ್ದವು. ಈರುಳ್ಳಿಗೆ ಮಳೆ ಹೆಚ್ಚಾದ ಕಾರಣ ಬೆಳೆ ಜತೆಗೆ ಕಳೆ ಹೆಚ್ಚಾಗಿ ಈ ಬಾರಿ ಎಕರೆ ಈರುಳ್ಳಿ ಸಲು ಕೈಸೇರುವ ಹೊತ್ತಿಗೆ ಮೂರು ಬಾರಿ ಕಳೆ ತೆಗೆಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆ ಅಬ್ಬರದಿಂದ ಮೂರು ಬಾರಿಯೂ ಹೆಚ್ಚಾಗಿ ಬೆಳೆದ ಕಳೆ ತೆಗೆಸಲು ರೈತ ಪರದಾಡುವಂತಾಗಿದೆ.
ಸ್ಥಳೀಯವಾಗಿ ಕಾರ್ಮಿಕರಿಲ್ಲದೆ ಅಕ್ಕಪಕ್ಕದ ಗ್ರಾಮಗಳಿಂದ ಕಾರ್ಮಿಕರನ್ನು ಕರೆಸಿಕೊಂಡು ಕಳೆ ತೆಗೆಸಲು ಮುಂದಾಗಿದ್ದಾರೆ. ಎಲ್ಲಾ ಸೇರಿ ಎಕರೆ ಈರುಳ್ಳಿ ಬೆಳೆ ಒಂದು ಹಂತದ ಕಳೆ ತೆಗೆಯಲು 15 ಸಾವಿರದ ವರೆಗೆ ಖರ್ಚು ಮಾಡಬೇಕಾಗಿದೆ. ಇದೇ ರೀತಿ ಮೂರು ಬಾರಿ ಕಳೆ ತೆಗೆಯುವುದು ಹೊರೆ ಬೀಳುತ್ತದೆ. ಇಷ್ಟೆಲ್ಲಾ ವ್ಯಯಿಸಿ ಈರುಳ್ಳಿ ಸಲಿಗೆ 30 ರೂ. ದೊರಕಿದರೆ ರೈತರ ಬಾಳಲ್ಲಿ ಬೆಳಕು ಮೂಡುತ್ತದೆ. ಇಲ್ಲವಾದಲ್ಲಿ ಮತ್ತೆ ಆರ್ಥಿಕ ಸಮಸ್ಯೆ ಎದುರಾಗಲಿದೆ.
ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆಗಳಿಗೆ ರೈತ ತುತ್ತಾಗುತ್ತಿದ್ದಾನೆ. ಒಂದು ವರ್ಷ ಮಳೆ ಕೈಕೊಟ್ಟರೆ ಮತ್ತೊಂದು ವರ್ಷ ಹೆಚ್ಚಾದ ಮಳೆಯಿಂದ ಸಮಸ್ಯೆ ಎದುರಾಗುತ್ತದೆ. ಇದರಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ ದರ ದೊರಕುವುದಿಲ್ಲ. ಹಾಗಾಗಿಯೇ ರೈತರ ಮಕ್ಕಳು ಬೇಸಾಯದಿಂದ ದೂರ ಉಳಿದು ಉದ್ಯೋಗ ಹರಸಿ ಬೇರೆ ಊರುಗಳಿಗೆ ತೆರಳುತ್ತಿದ್ದಾರೆ ಎನ್ನುತ್ತಾರೆ ರೈತ ಕರಿಯಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net