ಅಜ್ಜರಕಾಡಲ್ಲಿ ಚಿಟ್ಟೆ ಪಾರ್ಕ್ !

webbbb 1
Published on

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಭುಜಂಗಪಾರ್ಕ್‌ಗೆ ನೂತನ ಸ್ಪರ್ಶ ನೀಡಲು ಸಿದ್ಧತೆ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆ ಜಂಟಿ ಸಹಯೋಗದಲ್ಲಿ ಪಾರ್ಕ್ ಒಳಗೆ ಆಕರ್ಷಕ ಚಿಟ್ಟೆಪಾರ್ಕ್ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಲಾಗಿದೆ.
ಇದರಲ್ಲಿ ಆಕರ್ಷಕವಾದ ಚಿಟ್ಟೆಪಾರ್ಕ್ ರಚಿಸಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಚಿಟ್ಟೆಗಳನ್ನು ಆಕರ್ಷಿಸುವ ಮರಗಿಡಗಳನ್ನು ನೆಡುವುದು ಮೊದಲ ಆದ್ಯತೆ ಆಗಿದ್ದು, ಮಕರಂದ ಹೀರುವ ಸಸಿಗಳು, ಚಿಟ್ಟೆಗಳು ಮೊಟ್ಟೆಯನ್ನಿಡುವ ಜಾತಿಗಳ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. 40ಕ್ಕೂ ಅಧಿಕ ಚಿಟ್ಟೆಗಳ ಜಾತಿಗಳನ್ನು ಗಮನದಲ್ಲಿಟ್ಟುಕೊಂಡು ಪಾರ್ಕ್‌ಗೆ ಯೋಜನೆ ರೂಪಿಸಲಾಗುತ್ತಿದೆ. ಚಿಟ್ಟೆ ಅಧ್ಯಯನಕಾರರು. ಸಸ್ಯತಜ್ಞರೊಡನೆ ಸಮಾಲೋಚಿಸಲಾಗುತ್ತಿದೆ. ಪಾರ್ಕ್‌ನಲ್ಲಿ ಚಿಟ್ಟೆಗಳ ಕಲಾಕೃತಿ ಮತ್ತು ಪರಿಸರದಲ್ಲಿ ಚಿಟ್ಟೆಗಳ ಪಾತ್ರದ ಮಹತ್ವದ ಬಗ್ಗೆ ಮಾಹಿತಿಪೂರ್ಣ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1.35 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಚಿಟ್ಟೆ ಪಾರ್ಕ್ ಸೇರಿದಂತೆ ಪಾರ್ಕ್‌ನಲ್ಲಿ ಹಿರಿಯರಿಗೆ ಸಾರ್ವಜನಿಕರಿಗೆ ವ್ಯಾಯಾಮ ಹಾಗೂ ದೈಹಿಕ ಕಸರತ್ತು ಮಾಡಲು ಅನುಕೂಲವಾಗುವಂತೆ ವ್ಯವಸ್ಥಿತ ಹೊರಾಂಗಣ ಜಿಮ್ ನಿರ್ಮಿಸಲಾಗುತ್ತದೆ. ಲೆಗ್‌ಪ್ರೆಸ್, ಸೈಕ್ಲಿಂಗ್, ಶೋಲ್ಡರ್ ಪ್ರೆಸ್, ಸ್ವೆಪ್ ಟ್ರೈನರ್, ಚೆಸ್ಟ್ ಪ್ರೆಸ್ ಸೇರಿದಂತೆ 10ಕ್ಕೂ ಅಧಿಕ ಪರಿಕರ ಆಳವಡಿಸಲಾಗುತ್ತದೆ. ಪಾರ್ಕ್‌ನ ಅಭಿವೃದ್ಧಿ ಕಾಮಗಾರಿ 1.35 ಕೋ.ರೂ. ವೆಚ್ಚದಲ್ಲಿ ಮುಂದಿನ ಎರಡು ತಿಂಗಳೊಳಗೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಆಟದ ಉದ್ಯಾನವನಕ್ಕೆ ಹೈಟೆಕ್ ಸ್ಪ್ಪರ್ಶ ನೀಡಲಾಗಿದ್ದು, ಇದೀಗ ಸಂಪೂರ್ಣ ಭುಜಂಗ ಪಾರ್ಕ್‌ನ್ನು ಆಧುನೀಕರಿಸಲು ತಯಾರಿ ನಡೆಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಹಾಗೂ ನಗರಸಭೆಯಿಂದ 35 ಲಕ್ಷ ರೂ. ಅನುದಾನ ಮಂಜೂರಾಗಿದೆ.

ಪರಿಸರದಲ್ಲಿ ಚಿಟ್ಟೆಗಳ ಪಾತ್ರ ಮಹತ್ವದ್ದಾಗಿದ್ದು, ಅಜ್ಜರಕಾಡು ಭುಜಂಗಪಾರ್ಕ್‌ನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಚಿಟ್ಟೆಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ವಾಟರ್‌ಪೌಂಡ್, ಹೊರಾಂಗಣ ಜಿಮ್ ಸಹಿತ 1.35 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಎರಡು ತಿಂಗಳ ಒಳಗೆ ಮುಗಿದು ಸಾರ್ವಜನಿಕರಿಗೆ ಮುಕ್ತವಾಗಲಿದೆ. - ಕೆ.ರಘುಪತಿ ಭಟ್, ಶಾಸಕ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net