ಬಟರ್‌ಫ್ರೂಟ್ ಗಿಡಗಳಿಗೆ ಭಾರಿ ಬೇಡಿಕೆ

butter fruit
Published on

ಮಡಿಕೇರಿ:

ಬಟರ್‌ಫ್ರೂಟ್ ಹಣ್ಣಿನ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದ್ದು, ಬೆಣ್ಣೆ ಹಣ್ಣು ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಮತ್ತಷ್ಟು ರೈತರು ಈ ಹಣ್ಣು ಬೆಳೆಯಲು ಮುಂದಾಗುತ್ತಿರುವುದರ ಪರಿಣಾಮದಿಂದ ಗಿಡಕ್ಕೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಸ್ಥಳೀಯವಾಗಿ ಬಟರ್‌ಫ್ರೂಟ್‌ನ 2 ಉತ್ತಮ ತಳಿಗಳನ್ನು ಸಂಶೋಧಿಸಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಈ ಗಿಡಗಳು ಬೇಕೆಂದರೆ 3-4 ತಿಂಗಳು ಮೊದಲೇ ಬುಕ್ ಮಾಡಿ ಕಾಯಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಮೆಕ್ಸಿಕೋ, ಗ್ವಾಟೆಮಾಲ, ವೆಸ್ಟ್ ಇಂಡೀಸ್ ಮೂಲದ ಅವೊಕಡೋ ಎಂದರೆ ಸ್ಥಳೀಯವಾಗಿ ಬೆಣ್ಣೆಹಣ್ಣು ಎಂದೇ ಕರೆಯಲ್ಪಡುವ 'ಬಟರ್‌ಫ್ರೂಟ್' ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಾರುಕಟ್ಟೆ ಮೌಲ್ಯ ಪಡೆದುಕೊಳ್ಳುತ್ತಿದೆ. 19, 20ನೇ ಶತಮಾನದಲ್ಲಿ ಬ್ರಿಟಿಷರ ಮೂಲಕ ಭಾರತ ಮತ್ತು ಶ್ರೀಲಂಕಾಕ್ಕೆ ಬೆಣ್ಣೆಹಣ್ಣು ಕಾಲಿಟ್ಟಿತು. ಮೈಸೂರು ಸಂಸ್ಥಾನದಲ್ಲಿ ಸಾರ್ವಜನಿಕ ಉದ್ಯಾನಗಳ ಮೇಲ್ವಿಚಾರಕರಾಗಿದ್ದ ಜಾನ್ ಕೆಮರಾನ್ ಎಂಬವರು 1900ರಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಲಾಲ್‌ಬಾಗ್ ಉದ್ಯಾನದಲ್ಲಿ ಬಟರ್‌ಫ್ರೂಟ್ ಬೆಳೆದರು. 1910, 20ರ ಸುಮಾರಿಗೆ ತಮ್ಮ ಒಡೆತನದ ಕಾಫಿ ತೋಟಗಳಲ್ಲಿ ಬ್ರಿಟಷರ್ ಅವೊಕಡೋ ಬೆಳೆಯಲಾರಂಭಿಸಿದರು. ಬೆಂಗಳೂರಿನ ಕಂಟೋನ್ಮೆAಟ್ ಪ್ರದೇಶದ ಕೆಲ ಮನೆಗಳ ಹಿತ್ತಲಲ್ಲೂ ಇದೇ ಅವಧಿಯಲ್ಲಿ ಬೆಣ್ಣೆಹಣ್ಣು ಕಾಣಿಸಿಕೊಳ್ಳಲಾರಂಭಿಸಿತು.

ಕೊಡಗು ಜಿಲ್ಲೆಗೂ ಬ್ರಿಟಿಷರ್ ಮುಖಾಂತರವೇ ಬಟರ್‌ಫ್ರೂಟ್ ಪರಿಚಯ ಆಯಿತು. ಬಟರ್ ಫ್ರೂಟ್ ಗಿಡಗಳಿಂದ ಕಾಫಿ ಗಿಡಗಳಿಗೆ ನೆರಳಾಗುತ್ತದೆ. ಹಣ್ಣುಗಳು ಮನೆ ಉಪಯೋಗ, ಬಂಧುಗಳಿಗೆ ಹಂಚಲು ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಕಾಫಿ ತೋಟಗಳಿಂದಾಚೆಗೆ ಮನೆಗಳ ಹಿತ್ತಲು, ಕೈ ತೋಟಗಳಲ್ಲೂ ಬೆಣ್ಣೆಹಣ್ಣಿನ ಮರಗಳನ್ನು ಬೆಳೆಸಿಕೊಂಡು ಹಣ್ಣನ್ನು ಸ್ವಂತಕ್ಕೆ ಉಪಯೋಗಿಸುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳ ತನಕವೂ ವಾಣಿಜ್ಯ ಉದ್ದೇಶಕ್ಕೆ ಇಲ್ಲಿ ಈ ಹಣ್ಣನ್ನು ಬೆಳೆಯುತ್ತಿರಲಿಲ್ಲ.

2005ರ ಸುಮಾರಿಗೆ ಅಮೇರಿಕಾ ಮೂಲದ ಹಾಸ್ ತಳಿ ಕೊಡಗಿಗೆ ಪರಿಚಯ ಆಯಿತು. ನಂತರದ ದಿನಗಳಲ್ಲಿ ಬೆಣ್ಣೆಹಣ್ಣಿನ ವಾಣಿಜ್ಯ ಬೇಸಾಯ ಜನಪ್ರಿಯವಾಗತೊಡಗಿತು. ಈ ಹಣ್ಣಿನ ಬಳಕೆಯಿಂದ ಆಗುವ ಲಾಭಗಳ ಬಗ್ಗೆ ಪ್ರಚಾರ ಹೆಚ್ಚಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲೂ ಬೇಡಿಕೆ ಸೃಷ್ಠಿಯಾಯಿತು. ಕೆಜಿಗೆ ಸುಮಾರು 200 ರೂ. ದರ ಇದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಬೆಳೆಯುವವರ ಸಂಖ್ಯೆಯೂ ಜಾಸ್ತಿ ಆಯಿತು. ತೋಟಗಾರಿಕಾ ಸಂಶೋಧನಾ ಸಂಸ್ಥೆಗಳೂ ಮತ್ತಷ್ಟು ಸಂಶೋಧನೆಗೆ ಮುಂದಾದವು.

ಬಟರ್‌ಫ್ರೂಟ್ ಬೆಳೆಯನ್ನು ಎಲ್ಲೆಡೆ ಪಸರಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ತನ್ನದೇ ಆದ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಬೆಣ್ಣೆಹಣ್ಣಿನ ತಳಿಗಳು ಇರುವುದು ಕೇವಲ ಮೂರು ಮಾತ್ರ ಎನ್ನುತ್ತಾರೆ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳು. ಅರ್ಕಾ ಸುಪ್ರೀಮ್ ಮತ್ತು ಅರ್ಕಾ ಕೂರ್ಗ್ ರವಿ ಈ ಕೇಂದ್ರದಲ್ಲಿಯೇ ಸಂಶೋಧನೆ ಮಾಡಿರುವ ತಳಿಗಳಾಗಿದೆ. ಟಿಕೆಡಿ1 ಎನ್ನುವ ತಳಿಯನ್ನು ತಮಿಳುನಾಡಿನಲ್ಲಿ ಸಂಶೋಧಿಸಿದ್ದಾರೆ.

ಬಟರ್‌ಫ್ರೂಟ್ ಗಿಡಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಅರ್ಕಾ ಸುಪ್ರೀಮ್ ಮತ್ತು ಅರ್ಕಾ ಕೂರ್ಗ್ ರವಿ ತಳಿಯ ಗಿಡಗಳ ವಾಣಿಜ್ಯ ಉತ್ಪಾದನೆಯನ್ನು ಶುರುಮಾಡಿವೆ. ವರ್ಷಕ್ಕೆ ಸುಮಾರು 80 ಸಾವಿರ ಗಿಡಗಳನ್ನು ಬೆಳೆಯಲಾಗುತ್ತಿದೆ. ವಿವಿಧ ಕಾರಣಗಳಿಂದ ಸುಮಾರು 20 ಸಾವಿರ ಗಿಡಗಳು ಹಾಳಾದರೂ 50-60 ಸಾವಿರ ಗಿಡಗಳು ಮಾರಾಟಕ್ಕೆ ಲಭ್ಯವಾಗುತ್ತಿದೆ. ಆದರೆ ಬೇಡಿಕೆ ಹೆಚ್ಚು ಇರುವ ಕಾರಣಕ್ಕೆ ಈ ಗಿಡಗಳು ಸಾಕಾಗುತ್ತಿಲ್ಲ.

ಇಲ್ಲಿ ಬಟರ್ ಫ್ರೂಟ್ ಗಿಡ ಬೇಕೆಂದರೆ 3-4 ತಿಂಗಳ ಮೊದಲೇ ಬುಕ್ ಮಾಡಬೇಕಾಗುತ್ತದೆ. 10 ಗಿಡಗಳ ತನಕ ಸ್ಥಳದಲ್ಲೇ ಗಿಡ ಮಾರಾಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಿಂತಲೂ ಹೆಚ್ಚು ಗಿಡಗಳು ಬೇಕಾದರೆ ಸರದಿಯಲ್ಲಿ ಕಾಯಲೇಬೇಕಾದ ಅನಿವಾರ್ಯತೆ ಇದೆ. ಈ ಕೇಂದ್ರದಲ್ಲಿ ಒಂದು ಗಿಡಕ್ಕೆ 120 ರೂ. ನಂತೆ ಮಾರಾಟ ಮಾಡಲಾಗುತ್ತಿದ್ದು, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಈಶಾನ್ಯ ರಾಜ್ಯಗಳ ರೈತರೂ ಗಿಡಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳ ಪ್ರಕಾರ ಬಟರ್‌ಫ್ರೂಟ್ ಬೀಜದಿಂದ ಸಸ್ಯಾಭಿವೃದ್ಧಿ ಮಾಡಿದಾಗ ಗಿಡದಿಂದ ಗಿಡಕ್ಕೆ ಅವುಗಳ ಲಕ್ಷಣಗಳಲ್ಲಿ ವ್ಯತ್ಯಾಸ ಬರುತ್ತದೆ. ಹಾಗಾಗಿ ಕಸಿ ಕಟ್ಟಿದ ಗಿಡಗಳಿಗೆ ಬೇಡಿಕೆ ಹೆಚ್ಚಿದೆ. ಕಸಿ ಕಟ್ಟಿದ ಗಿಡಗಳಲ್ಲಿ ತಾಯಿ ಗಿಡದ ಗುಣಲಕ್ಷಣಗಳು ಮುಂದುವರಿದಿರುತ್ತದೆ. ಇದರಿಂದಾಗಿ ಈ ವ್ಯಾಪ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನರ್ಸರಿಗಳೂ ಹುಟ್ಟಿಕೊಂಡಿದ್ದು, ಅಲ್ಲಿಯೂ ಕಸಿ ಕಟ್ಟಿದ ಗಿಡಗಳಲ್ಲಿ ಭಾರಿ ಬೇಡಿಕೆ ಇದೆ.

ಬಟರ್‌ಪ್ರೂಟ್ ಬೆಳೆಯಲು ಸುಲಭ ಎನ್ನುವ ಕಾರಣಕ್ಕೆ ಜನಪ್ರಿಯ ಬೆಳೆ ಆಗುತ್ತಿದೆ. ಹಣ್ಣಿನ ಸಿಪ್ಪೆ ಕಹಿ ಇರುವುದರಿಂದ ಮಂಗಗಳು ಇದರ ಹತ್ತಿರ ಬರುವುದಿಲ್ಲ ಎನ್ನುವುದು ಇದರ ಆಕರ್ಷಣೆ ಹೆಚ್ಚಲು ಕಾರಣವಾಗಿದೆ. ವರ್ಷದಲ್ಲಿ 2 ಬಾರಿ ಫಸಲು ಸಿಗುತ್ತದೆ. ನೀರು ಹೆಚ್ಚು ಬೇಕಿಲ್ಲ. ಕೀಟಗಳು ಅಷ್ಟಾಗಿ ಕಾಟ ಕೊಡುವುದಿಲ್ಲ. ಗೊಬ್ಬರವನ್ನೂ ಹಾಕಬೇಕಿಲ್ಲ. ಒಂದು ದೊಡ್ಡ ಗಿಡ 100,150 ಹಣ್ಣುಗಳನ್ನು ಬಿಡಬಲ್ಲದು. ಹೂವುಗಳು ಜೇನುನೊಣಗಳಿಗೆ ಪ್ರಿಯವಾಗುವುದರಿಂದ ಜೇನುತುಪ್ಪ ಉತ್ಪಾದನೆಗೂ ಪ್ರಯೋಜನಕಾರಿ. ಎಷ್ಟು ಬಲಿತರೂ ಗಿಡದಲ್ಲಿ ಹಣ್ಣಾಗುವುದಿಲ್ಲ. ಎಷ್ಟು ಬೇಕೋ ಅಷ್ಟು ಕೀಳಬಹುದು. ಕಿತ್ತ ನಂತರವೂ ಹಣ್ಣಾಗಲು 2 ದಿನ ಬೇಕಾಗುತ್ತದೆ.

ಹಣ್ಣಿನಲ್ಲಿ ಇರುವ ಜೀವಸತ್ವಗಳ ಪ್ರಮಾಣದ ಆಧಾರದಲ್ಲಿ ಆ ಹಣ್ಣುಗಳ ಮೌಲ್ಯ ನಿರ್ಧಾರ ಆಗುತ್ತದೆ. ಈ ವಿಷಯದಲ್ಲಿ ಬಟರ್‌ಫ್ರೂಟ್ ಉತ್ತಮ ಸ್ಥಾನದಲ್ಲಿದೆ. ಅಪರೂಪದ ಪೌಷ್ಟಿಕಾಂಶ ಭರಿತ ಮತ್ತು ಔಷಧೀಯ ಹಣ್ಣು ಎಂದು ಇದನ್ನು ಆಹಾರ ತಜ್ಞರು ಗುರುತಿಸುತ್ತಾರೆ. ಸಂಪೂರ್ಣ ಅಪಾಯರಹಿತ ಕೊಬ್ಬಿನಾಂಶ ಅಧಿಕ ಪ್ರಮಾಣದಲ್ಲಿ ಹೊಂದಿದ ಏಕೈಕ ತೋಟಗಾರಿಕಾ ಹಣ್ಣು ಇದಾಗಿದೆ. ಭಾರತದಲ್ಲಿ ಕೇವಲ ಹಣ್ಣಾಗಿ ಮಾತ್ರ ಬಳಕೆ ಆಗುವ ಅವೊಕಡೋ ವಿದೇಶದಲ್ಲಿ ಬೆಳಗ್ಗಿನ ತಿಂಡಿಯಾಗಿ, ಊಟದ ಒಂದು ಭಾಗವಾಗಿ ಉಪಯೋಗ ಆಗುತ್ತಿದೆ.

ಬಟರ್‌ಫ್ರೂಟ್ ಗಿಡಕ್ಕೆ ಭಾರಿ ಬೇಡಿಕೆ ಇದೆ. ನಮ್ಮ ಕೇಂದ್ರದಲ್ಲಿ ಗುಣಮಟ್ಟದ ಗಿಡಗಳನ್ನು ಉತ್ಪಾದನೆ ಮಾಡಲಾಗುತ್ತದೆ. ವರ್ಷಕ್ಕೆ 50-60 ಸಾವಿರ ಗಿಡಗಳನ್ನು ಬೆಳೆಗಾರರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿದೆ. ಬೇರೆ ಗಿಡಗಳನ್ನೂ ನಮ್ಮಲ್ಲಿ ಬೆಳೆಯಬೇಕಿರುವುದರಿಂದ ನಿಗದಿತ ಪ್ರಮಾಣದಲ್ಲಿ ಮಾತ್ರ ಬೆಣ್ಣೆಹಣ್ಣಿನ ಗಿಡ ಬೆಳೆಯಲಾಗುತ್ತಿದೆ. ಹಾಗಾಗಿ ಗಿಡಗಳು ಬೇಕಾದರೆ ಮೊದಲೇ ಬುಕ್ ಮಾಡಿ ತಮ್ಮ ಸರದಿ ಬರುವ ತನಕ ಕಾಯುವುದು ಅನಿವಾರ್ಯ.

ಡಾ. ಬಿ.ಎಂ. ಮುರಳೀಧರ್, ಹಣ್ಣು ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net