ಬೆಣ್ಣೆ-ಹೂವಿನ ಮಾರುಕಟ್ಟೆ ಅಭಿವೃದ್ಧಿಗೆ ಚಿಂತನೆ, ಕೊಟ್ಟೂರು ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್ ಮಾಹಿತಿ

020220 Kotturu APMC President Boodi Shivakumar
Published on

ಕೊಟ್ಟೂರು: ಸ್ಥಳೀಯ ಹೂ ಹಾಗೂ ಬೆಣ್ಣೆ ಮಾರುಕಟ್ಟೆ ಅಭಿವೃದ್ಧಿ ಪಡಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚಿಂತನೆ ನಡೆಸಿದೆ ಎಂದು ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್ ಹೇಳಿದರು.

ಎಪಿಎಂಸಿಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಣ್ಣೆ ಮಾರಾಟಕ್ಕೆ ಪಟ್ಟಣ ಪ್ರಸಿದ್ಧಿ ಪಡೆದಿದೆ. ಹಲವು ದಶಕಗಳಿಂದ ವ್ಯಾಪಾರ ಉತ್ತಮವಾಗಿ ನಡೆಯುತ್ತಿದ್ದು, ಇದರ ಮಾರುಕಟ್ಟೆ ಮತ್ತಷ್ಟು ವೃದ್ಧಿಸಿ ರೈತರಿಗೆ ಅನುಕೂಲ ಮಾಡಿಕೊಡುವುದು ಮುಖ್ಯ ಉದ್ದೇಶವಾಗಿದೆ ಎಂದರು.

ತಾಲೂಕು ಸೇರಿ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಸಂಡೂರು, ಜಗಳೂರು ಮತ್ತು ಹಲವು ಕಡೆಯಿಂದ ರೈತರು ಹೂವು ಮಾರಾಟಕ್ಕೆ ಪಟ್ಟಣಕ್ಕೆ ಬರುತ್ತಿದ್ದು, ವಾರದಲ್ಲಿ ಐದಾರು ದಿನ ಹೂವಿನ ಮಾರುಕಟ್ಟೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಹೂವಿನ ಸಗಟು ಮಾರಾಟ ಕೊಟ್ಟೂರಿನಲ್ಲಿ ಮಾತ್ರ ನಡೆಯುತ್ತಿದ್ದು, ಇಲ್ಲಿಂದ ಕಲಬುರಗಿ, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಹಿರಿಯೂರಿಗೆ ಸರಬರಾಜು ಆಗುತ್ತದೆ. ಬೆಣ್ಣೆ ಮತ್ತು ಹೂವಿನ ಮಾರುಕಟ್ಟೆಯಲ್ಲಿ ನಗದು ಜತೆಗೆ ಪಾರದರ್ಶಕ ವ್ಯಾಪಾರ ನಡೆಯುತ್ತದೆ.

ಈ ಕುರಿತು ಎಪಿಎಂಸಿ ಉಪಾಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಚರ್ಚಿಸಿ, ಈ ಎರಡು ಮಾರುಕಟ್ಟೆಗಳನ್ನು ಎಪಿಎಂಸಿ ವ್ಯಾಪ್ತಿಗೆ ಸೇರ್ಪಡೆಗೆ ಸಾಧ್ಯವೇ ಎಂಬುದನ್ನು ರಾಜ್ಯ ಕೃಷಿ ಇಲಾಖೆ ನಿರ್ದೇಶಕರಿಗೆ ಮತ್ತು ಕೃಷಿ ಸಚಿವರಿಗೆ ಶೀಘ್ರ ಪತ್ರ ಬರೆಯಲಾಗುವುದು. ಹಾಗೊಂದು ವೇಳೆ ಸಮ್ಮತಿಸಿ ಪ್ರತ್ಯೇಕ ಮಾರುಕಟ್ಟೆ ಅಭಿವೃದ್ಧ್ದಿಗೆ ಅನುದಾನ ನೀಡಿದರೆ, ಬೆಣ್ಣೆ ಮತ್ತು ಹೂವು ಬೆಳೆಯುವ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಎಪಿಎಂಸಿ ಕಾರ್ಯದರ್ಶಿ ವಿ.ಜೆ.ಹೀರೆಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net