

ಬೆಳಗಾವಿ: ಅನುದಾನವಿಲ್ಲದೆ ನಲುಗಿದ ಕಸಾಪ!ಜಗದೀಶ ಹೊಂಬಳಿ ಬೆಳಗಾವಿ ಕನ್ನಡ ನಾಡು, ನುಡಿ ರಕ್ಷಣೆ ಹಾಗೂ ಕನ್ನಡ ಸರ್ವ ವ್ಯಾಪಿಯಾಗಿಸಲು ಸರ್ಕಾರ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಸ್ಥಾಪನೆ ಮಾಡಿದೆ. ಕನ್ನಡದ ಉಳಿಗಾಗಿ ಶ್ರಮಿಸುತ್ತಿರುವ ಕಸಾಪಕ್ಕೆ ಇದೀಗ ಅನುದಾನ ಕೊರತೆ ಎದುರಾಗಿದೆ. ಇದರಿಂದ ಕಸಾಪ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದು, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ದೇಣಿಗೆ ಸಂಗ್ರಹಿಸಿ, ಗಣ್ಯರಿಂದ ಊಟ, ಸ್ಮರಣಿಕೆ, ಪೆಂಡಾಲ್ ವ್ಯವಸ್ಥೆ ಮಾಡಿಕೊಂಡು ನಡೆಸುವ ಪರಿಸ್ಥಿತಿಗೆ ಬಂದು ನಿಂತಿದೆ.
ಪ್ರತಿವರ್ಷ ನವೆಂಬರ್ ತಿಂಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳು ಆರಂಭವಾಗಿ ಮಾರ್ಚ್‌ವರೆಗೆ ನಡೆಯುತ್ತವೆ. ಆದರೆ, ಕಳೆದ ಎರಡು ವರ್ಷಗಳಿಂದ ಸರ್ಕಾರ ಅನುದಾನ ನೀಡದಿರುವುದಕ್ಕೆ ಸಮ್ಮೇಳನಗಳು ಮರೀಚಿಕೆಯಾಗುತ್ತಿವೆ. ಕೆಲವು ತಾಲೂಕುಗಳಲ್ಲಿ ಸರ್ಕಾರ ಅನುದಾನ ನೀಡದಿದ್ದರೂ ಕಸಾಪ ತಾಲೂಕು ಅಧ್ಯಕ್ಷರು, ಸದಸ್ಯರು ದಾನಿಗಳಿಂದ ಹಣ ಸಂಗ್ರಹಿಸಿ, ಪ್ರಯಾಸಪಟ್ಟು ಸಮ್ಮೇಳನ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಕನ್ನಡ-ಮರಾಠಿ ಭಾಷಿಕರಿರುವ ಅತಿ ಸೂಕ್ಷ್ಮ ಪ್ರದೇಶದಲ್ಲೂ ಕನ್ನಡ ಗಟ್ಟಿಗೊಳಿಸುವುದಕ್ಕೆ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬೇಕಾಗುತ್ತದೆ. ಆದರೆ, ಸರ್ಕಾರ ಬೆಳಗಾವಿಗೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಅನುದಾನ ನೀಡುತ್ತಿಲ್ಲ. ಹೀಗಾಗಿ ಗಡಿಭಾಗದಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಗಳು ಸ್ಥಗಿತಗೊಂಡಿವೆ. ಅನುದಾನ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮೇಲಿಂದ ಮೇಲೆ ಪತ್ರ ಬರೆದರೂ ಸರ್ಕಾರ ಅನುದಾನ ನೀಡುವುದಕ್ಕೆ ಮುಂದಾಗುತ್ತಿಲ್ಲ.
ಬಹುತೇಕ ತಾಲೂಕುಗಳ ಸ್ತಬ್ಧ:
ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಜರುಗಿಯೇ ಇಲ. ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಕಾಗವಾಡ, ಹುಕ್ಕೇರಿ, ಮೂಡಲಗಿ, ಯರಗಟ್ಟಿ, ಸವದತ್ತಿ ತಾಲೂಕಿನಲ್ಲಿ ಎರಡು ವರ್ಷಗಳಿಂದ ಸಾಹಿತ್ಯ ಸಮ್ಮೇಳನಗಳು ನಡೆದಿಲ್ಲ. ಗೋಕಾಕ, ರಾಯಬಾಗದಲ್ಲಿ ಆಗಿವೆ. ಜ.27ರಂದು ಕಾಕತಿಯಲ್ಲಿ ಬೆಳಗಾವಿ ತಾಲೂಕು ಸಮ್ಮೇಳನ ಆಯೋಜಿಸಲಾಗಿದ್ದು, ದೇಣಿಗೆ ಸಂಗ್ರಹಿಸಿ ಸಮ್ಮೇಳನ ಮಾಡುತ್ತಿದ್ದಾರೆ.
5 ಲಕ್ಷ ರೂ.ದೇಣಿಗೆ ಸಂಗ್ರಹಿಸುವ ಗುರಿ:
ಬೆಳಗಾವಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಸರ್ಕಾರ ಅನುದಾನ ನೀಡಿಲ್ಲ. ಹೀಗಾಗಿ ಸಾರ್ವಜನಿಕರು, ಉದ್ಯಮಿಗಳು ಹಾಗೂ ಶಿಕ್ಷಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈಗಾಗಲೇ 2 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ. 5 ಲಕ್ಷ ರೂ. ವರೆಗೆ ಸಂಗ್ರಹಿಸುವುದಕ್ಕೆ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಉದ್ಯಮಿಗಳು ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಗ್ರಾಪಂಗಳು ಸಾಹಿತ್ಯ ಸಮ್ಮೇಳನದ ಸ್ಮರಣಿಕೆ ನೀಡುವ ಜವಾಬ್ದಾರಿ ಹೊತ್ತುಕೊಂಡಿದೆ. ಸಮ್ಮೇಳನದ ಇನ್ನುಳಿದ ಚಟುವಟಿಕೆಗಳಿಗೆ ಸಾರ್ವಜನಿಕರು, ಶಿಕ್ಷಕರು ದೇಣಿಗೆ ನೀಡುತ್ತಿದ್ದಾರೆ.
ಜನಪ್ರತಿನಿಧಿಗಳ ನಿಷ್ಕಾಳಜಿ:
ಗಡಿಜಿಲ್ಲೆ ಬೆಳಗಾವಿಯಲ್ಲಿ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅಂತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ರಾಜ್ಯೋತ್ಸವಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರೂ ಸರ್ಕಾರಕ್ಕೆ ಕೊಡುತ್ತಿಲ್ಲ. ಹೀಗಾಗಿ ರಾಜ್ಯೋತ್ಸವಕ್ಕೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಕನ್ನಡ ನಾಡು-ನುಡಿ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಎಷ್ಟು ಕಾಳಜಿ ಇದೆ ಎನ್ನುವುದು ಇದರಲ್ಲಿ ಎದ್ದು ಕಾಣುತ್ತಿದೆ.