

ಕೊಳ್ಳೇಗಾಲ: ಪಟ್ಟಣದ ಸರ್ಕಾಟನ್ ಕಾಲುವೆಗೆ ಮಾಂಸದಂಗಡಿಗಳ ತ್ಯಾಜ್ಯ ಸುರಿಯವುದರಿಂದ ವಾತಾವರಣ ಕಲುಷಿತಗೊಂಡಿದ್ದು ಸಾರ್ವಜನಿಕರಿಗೆ ರೋಗ-ರುಜಿನಗಳ ಭೀತಿ ಎದುರಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಭವನ ಮುಂಭಾಗದ ರಸ್ತೆ ಯಿಂದ ಹಳೇ ಕುರುಬರ ಬೀದಿಗೆ ಸಂಪರ್ಕ ಬೆಸೆಯುವ ರಸ್ತೆಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸರ್ಕಾಟನ್ ಕಾಲುವೆಗೆ ಕೋಳಿ, ಮೀನು ಹಾಗೂ ಕುರಿಗಳ ಮಾಂಸದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದನ್ನು ಪ್ರಶ್ನಿಸಬೇಕಿದ್ದ ನಗರಸಭೆ ಪರಿಸರ ಅಧಿಕಾರಿಗಳು ಕಚೇರಿಗೆ ಅಂಟಿಕೊಂಡು ಕುಳಿತಿದ್ದಾರೆ.
ಪಟ್ಟಣದ ಡಾ.ರಾಜ್‌ಕುಮಾರ್ ರಸ್ತೆಯಿಂದ ಹಳೇ ಕುರುಬರ ಬೀದಿಗೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿ ಮೀನು, ಕೋಳಿ ಹಾಗೂ ಕುರಿ ಮಾಂಸದ ಮಾರಾಟ ಅಂಗಡಿಗಳಿದ್ದು ಇದರ ಕೂಗಳತೆ ದೂರದಲ್ಲಿರುವ ಸರ್ಕಾಟನ್ ಕಾಲುವೆಗೆ ಮಾಂಸದಂಗಡಿಗಳ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇದ್ದರಿಂದ ಕಾಲುವೆಯೊಳಗೆ ಮಾಂಸದ ತ್ಯಾಜ್ಯಗಳು ಮಡುಗಟ್ಟಿ ನಿಂತಿದೆ. ಸುತ್ತಮುತ್ತಲ ಪ್ರದೇಶವು ಗಬ್ಬು ಮಾರುತ್ತಿದೆ. ಕಾಲುವೆ ಸಮೀಪವಿರುವ ಪೌರ ಕಾರ್ಮಿಕರ ಕಾಲನಿ, ಹಳೇ ಕುರುಬರ ಬೀದಿ ನಿವಾಸಿಗಳ ವಾಸನೆಗೆ ಹೈರಾಣರಾಗಿದ್ದಾರೆ. ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೆ ಸಂಚರಿಸಬೇಕಿದೆ.
ಪಟ್ಟಣ ಮಧ್ಯದಲ್ಲಿಯೇ ಈ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಿರುವುದು ನಗರಸಭೆ ಅಧಿಕಾರಿಗಳ ವೈಫಲ್ಯ ಎನ್ನಬಹುದು. ಈ ಹಿಂದೆಯೂ ವಿಜಯವಾಣಿ ಪತ್ರಿಕೆ ಗೆಬ್ಬೆದು ನಾರುತ್ತಿದೆ ಸರ್ಕಾಟನ್ ಕಾಲುವೆ ಎಂದು ವರದಿ ಪ್ರಕಟಿಸಿತ್ತು. ಪರಿಸರ ಇಂಜಿನಿಯರ್ ಪ್ರಸನ್ನ ಕುಮಾರ್ ಕಾಲುವೆಯೊಳಗೆ ಮಾಂಸದ ತ್ಯಾಜ್ಯವನ್ನು ಸುರಿಯುವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದರು. ಆದರೆ ಅವರ ಕ್ರಮ ಕೇವಲ ಮಾತಿಗೆ ಸೀಮಿತವಾಗಿತ್ತು ಎಂಬುದಕ್ಕೆ ಕಾಲುವೆ ಇರುವ ಪರಿಸ್ಥಿತಿಯೇ ನೈಜ ಸಾಕ್ಷಿಯಾಗಿದೆ.
ಮಾಂಸದಂಗಡಿಗಳ ತ್ಯಾಜ್ಯದಿಂದ ಕಾಲುವೆ ಸುತ್ತಮುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ಇದೀಗ ಮಳೆಗಾಲ ಆಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ಸ್ಥಳೀಯರಿದ್ದಾರೆ. ನಗರಸಭೆ ಕಚೇರಿಯಲ್ಲಿಯೇ ಕೂರದೆ ಜನಬಿಡಾರ ಪ್ರದೇಶದಲ್ಲಿ ವಾತಾವರಣ ಹೇಗಿದೆ. ಇಂತಹ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಲು ಏನು ಮಾಡಬೇಕೆಂಬುದನ್ನು ನಗರಸಭೆ ಅಧಿಕಾರಿಗಳು ಆಲೋಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರೆ.
ಸರ್ಕಾಟನ್ ಕಾಲುವೆಗೆ ಮಾಂಸ ದಂಗಡಿಗಳ ತ್ಯಾಜ್ಯ ಸುರಿಯುವಂತ್ತಿಲ್ಲ. ಸ್ಥಳ ಪರಿಶೀಲಿಸಿ ಕ್ರಮ ವಹಿಸುತ್ತೇನೆ.