

ಬೈಂದೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡ ಧರ್ಮಶ್ರೀ ರಿಲೀಫ್ ಫೌಂಡೇಶನ್ ಸಂಸ್ಥೆ ವತಿಯಿಂದ ಶನಿವಾರ ಬೈಂದೂರು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ನಿರ್ಮಿಸಿದ ತಂಗುದಾಣವನ್ನು ಕೊಂಕಣ ರೈಲ್ವೆ ತರಬೇತಿ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ಶ್ರೀಧರ ಅವಭೃತ್ ಹಾಗೂ ಸೀನಿಯರ್ ರೀಜನಲ್ ಟ್ರಾಫಿಕ್ ಮ್ಯಾನೇಜರ್ ದೀಪಕ್ ಭಟ್ ಲೋಕಾರ್ಪಣೆಗೊಳಿಸಿದರು.
ಶ್ರೀಧರ ಅವಭ್ರತ್ ಮಾತನಾಡಿ, ಹಲವು ವರ್ಷಗಳಿಂದ ಬೈಂದೂರು ವಲಯದಲ್ಲಿ ಸಮಾಜ ಸೇವೆ ಮಾಡುತ್ತಿರುವ ಧರ್ಮಶ್ರೀ ಫೌಂಡೇಶನ್ ಸಂಸ್ಥೆ ನಮ್ಮ ರೈಲು ಇಲಾಖೆಗೆ ತಂಗುದಾಣ ಕೊಡುಗೆಯಾಗಿ ನೀಡಿದ್ದು ಸಂತೋಷದ ವಿಚಾರ. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಸುವರ್ಣ ಅವರು ಸ್ವಂತ ಉದ್ಯಮದಿಂದ ಬಂದ ಆದಾಯದಲ್ಲಿ ಲಕ್ಷಾಂತರ ರೂ.ಮೌಲ್ಯದ ತಂಗುದಾಣ ಪ್ರಯಾಣಿಕರ ವಿಶ್ರಾಂತಿಗೆ ನೀಡಿದ್ದಾರೆ. ಈ ಸಂಸ್ಥೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ನೀಡಲಿ ಎಂದರು.
ಹಿರಿಯ ಅಧಿಕಾರಿ ದಿಲೀಪ್ ಡಿ.ಭಟ್, ಸಂಸ್ಥೆಯ ಸಂಸ್ಥಾಪಕ ನಾಗರಾಜ್ ಆರ್.ಸುವರ್ಣ, ಟ್ರಸ್ಟಿ ನಿರ್ಮಲಾ ಸುವರ್ಣ, ಕಾರ್ಯದರ್ಶಿ ಗಣೇಶ ಮಟ್ನಕಟ್ಟೆ, ರಾಘವೇಂದ್ರ ಪೂಜಾರಿ, ರೂಪೇಶ್ ಪೂಜಾರಿ, ಸುಶೀಲಾ ಸುವರ್ಣ ಮತ್ತಿತರರು ಇದ್ದರು. ಮಹೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಪೂಜಾರಿ ವಂದಿಸಿದರು.