ಸಾರಿಗೆ ನಿಲ್ದಾಣಕ್ಕೆ ರೆಡ್‌ಸಿಗ್ನಲ್

DABASPETE STORY 1
Published on

 ಬೆಂಗಳೂರು ಗ್ರಾಮಾಂತರ ಗ್ರಾಮಾಂತರ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿರುವ ಸೋಂಪುರ ಕೈಗಾರಿಕಾವಲಯವನ್ನೊಳಗೊಂಡಿರುವ ದಾಬಸ್‌ಪೇಟೆಯಲ್ಲಿ ಸರ್ಕಾರಿ ಸಾರಿಗೆ ಬಸ್ ನಿಲ್ದಾಣ ಕಾಮಗಾರಿಗೆ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ಅರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿಲ್ಲ.

ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿ ನಗರೀಕರಣದತ್ತ ವೇಗವಾಗಿ ಮುನ್ನುಗ್ಗುತ್ತಿದೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಸಾವಿರಾರು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ ಆದರೆ ಇಲ್ಲಿನ ಸೂಕ್ತ ಸಾರಿಗೆ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

2 ವರ್ಷದಿಂದ ನನೆಗುದಿದೆ: 2023 ರಲ್ಲಿ ಸುಮಾರು 69 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುದ್ದಲಿಪೂಜೆ ನೇರವೇರಿಸಲಾಯಿತು. ಇದಾಗಿ 2 ವರ್ಷ ಕಳೆದರೂ ಕಾಮಗಾರಿ ಟೇಕಾಪ್ ಆಗುತ್ತಿಲ್ಲ. ಕಾಮಗಾರಿ ಹಿನ್ನೆಲೆಯಲ್ಲಿ ಸಂಪ್‌ಗಾಗಿ ಗುಂಡಿ ತೆಗೆದು ಹಾಗೇ ಬಿಡಲಾಗಿದೆ. ಶೌಚಗೃಹ ನಿರ್ಮಾಣಕ್ಕೆ ತೋಡಿರುವ ಗುಂಡಿಗಳು ಬಾಯ್ತೆರೆದು ನಿಂತಿವೆ. ಇದರಿಂದ ಕಾಮಗಾರಿ ನಡೆಸಬೇಕಾದ ಸ್ಥಳಗಳ ಸುತ್ತಮುತ್ತಲ ಪ್ರದೇಶದ ಜನವಸತಿ ಪ್ರದೇಶಗಳ ಶೌಚವ್ಯವಸ್ಥೆ ಅಸ್ತವ್ಯಸ್ಥವಾಗಿದ್ದು, ಮಲಿನ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ ಪ್ರತಿದಿನ ದುರ್ವಾಸನೆ ಸಹಿಸುತ್ತಿರುವ ನಿವಾಸಿಗಳು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಸ್ ನಿಲ್ದಾಣ ಕಾಮಗಾರಿಗಾಗಿ ಕೆಲವು ಮರಗಳನ್ನು ಕಡಿಯಲು ಗುರುತು ಹಾಕಲಾಗಿದೆ ಅವುಗಳು ಹಾಗೇ ಇವೆ, ಜಲ್ಲಿ, ಮರಳು ತಂದು ಸುರಿಯಲಾಗಿದ್ದರೂ ಅವು ಈಗಾಗಲೇ ಮಣ್ಣುಪಾಲಾಗಿವೆ. ಜನರ ತೆರಿಗೆ ಹಣ ೆಲಾಗುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ತಲೆ ಹಾಕುತ್ತಿಲ್ಲ.

 ಗುತ್ತಿಗೆದಾರರನ್ನು ಬದಲಿಸಲಾಗುವುದು: ಬಸ್ ನಿಲ್ದಾಣದ ಕಾಮಗಾರಿ ನಿಂತಿರುವುದು ನಮ್ಮ ಗಮನಕ್ಕೆ ಬಂದಿದೆ, ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಬೇರೆ ಗುತ್ತಿಗೆದಾರರನ್ನು ನೇಮಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತುಮಕೂರು ಕೆಸ್ಸಾರ್ಟಿಸಿ ವ್ಯವಸ್ಥಾಪಕರು ಪ್ರತಿಕ್ರಿಯಿಸಿದ್ದಾರೆ.

ಬಸ್ ನಿಲ್ದಾಣದ ಸಮೀಪವೇ ನಮ್ಮ ಮನೆ ಇದೆ, ಬಸ್ ನಿಲ್ದಾಣ ಕಾಮಗಾರಿಗಾಗಿ ಶೌಚಗುಂಡಿಗಳನ್ನು ತೆಗೆದು ಹಾಗೇ ಬಿಟ್ಟಿದ್ದಾರೆ ಇದರಿಂದ ಮಲಿನ ನೀರು ಹೊರಸೂಸಿ ಗಬ್ಬುವಾಸನೆ ಬರುತ್ತಿದೆ ಇದರಿಂದ ಪ್ರತಿದಿನ ನರಕಹಿಂಸೆ ಅನುಭವಿಸುವಂತಾಗಿದೆ ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ರಂಗನಾಥ್, ದಾಬಸ್‌ಪೇಟೆ

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net