

ಈಶ್ವರಮಂಗಲ: ಪುತ್ತೂರು ತಾಲೂಕಿನ ಒಳಮೊಗ್ರು ಅಜ್ಜಿಕಲ್ಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಅಲ್ಯುಮಿನಿಯಂ ಕೊಕ್ಕೆ ಬಳಸಿ ಮರದಿಂದ ಅಡಕೆ ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಪ್ರವಹಿಸಿ ಉದ್ಯಮಿಯೊಬ್ಬರು ಮೃತ ಪಟ್ಟಿದ್ದಾರೆ.
ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿ ಅವರ ಪುತ್ರ, ಮಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದ ರವೀಂದ್ರ ಪೂಜಾರಿ(36) ಮೃತ ಪಟ್ಟವರು.
ಮಂಗಳೂರಿನ ಬಿಜೈ ಬಳಿ ಕಂಪ್ಯೂಟರ್ ಹಾರ್ಡ್‌ವೇರ್‌ಗೆ ಸಂಬಂಧಿಸಿದ ‘ಜಿಆರ್‌ಬಿ ಇನ್ಪೋಟೆಕ್’ ಎಂಬ ಸಂಸ್ಥೆ ನಡೆಸುತ್ತಿದ್ದ ರವೀಂದ್ರ ಪೂಜಾರಿ, ಕ್ರಿಸ್‌ಮಸ್ ರಜೆ ನಿಮಿತ್ತ ಅಜ್ಜಿಕಲ್ಲಿನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಮನೆಯ ಸುತ್ತ ನೆಟ್ಟಿದ್ದ ಅಡಕೆ ಮರಗಳಲ್ಲಿ ಹಣ್ಣಾಗಿದ್ದ ಅಡಕೆಯನ್ನು ಅವರು ಅಲ್ಯೂಮಿನಿಯಂ ಕೊಕ್ಕೆ ಬಳಸಿ ಕೊಯ್ಯಲು ಮುಂದಾಗಿದ್ದರು. ಈ ಸಂದರ್ಭ ಅಲ್ಯೂಮಿನಿಯಂ ಕೊಕ್ಕೆ ಮೇಲ್ಭಾಗದಲ್ಲಿ ಹಾದು ಹೋಗಿದ್ದ ಎಚ್.ಟಿ.ವಿದ್ಯುತ್ ಲೈನಿಗೆ ಸ್ಪರ್ಶಿಸಿದೆ. ಪರಿಣಾಮ ಕೊಕ್ಕೆ ಮೂಲ ವಿದ್ಯುತ್ ಪ್ರವಹಿಸಿ ಆಘಾತಕ್ಕೆ ಒಳಗಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ತಂದೆ, ತಾಯಿ, ತೆಗ್ಗು ಸರ್ಕಾರಿ ಶಾಲೆ ಶಿಕ್ಷಕಿಯಾಗಿರುವ ಪತ್ನಿ, ಒಂದು ವರ್ಷದ ಮಗುವನ್ನು ಅಗಲಿದ್ದಾರೆ.