

ಚಿಕ್ಕೋಡಿ : ದೇಶಾದ್ಯಂತ ಲಾಕ್‌ಡೌನ್ ಸಡಿಲಿಕೆಗೊಂಡ ಬಳಿಕ ಪಟ್ಟಣಗಳಲ್ಲಿ ಜನ ಸಂಚಾರ ಅಧಿಕಗೊಂಡಿದೆ. ಹೀಗಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಮತ್ತೆ ಕರೊನಾ ವೈರಸ್ ಆರ್ಭಟ ಹೆಚ್ಚಾಗುತ್ತಿರುವುದರಿಂದ ಚಿಕ್ಕೋಡಿ ಪಟ್ಟಣದಲ್ಲಿ ಜು. 13 ರಿಂದ 18ರ ವರೆಗೆ ವ್ಯಾಪಾರಸ್ಥರು ಸ್ವಯಂ ಲಾಕ್‌ಡೌನ್‌ಗೆ ನಿರ್ಧರಿಸಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಗದೀಶ ಕವಟಗಿಮಠ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪುರಸಭೆ ಆವರಣದಲ್ಲಿ ಕರೊನಾ ವೈರಸ್ ನಿಯಂತ್ರಿಸಲು ತಹಸೀಲ್ದಾರ್ ಸುಭಾಷ ಸಂಪಗಾವಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದರು. ಕರೊನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯಲ್ಲೂ ಸೋಂಕಿತರ ಹಾಗೂ ಸಾವಿನ ಪ್ರಕರಣ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಾರಸ್ಥರು ವ್ಯವಹಾರ ಬಂದ್ ಮಾಡಲು ತೀರ್ಮಾನಿಸಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ಒಂದು ವಾರದವರೆಗಾದರೂ ವ್ಯಾಪಾರ ಬಂದ್ ಮಾಡಲು ನಿರ್ಧರಿಸಿರುವುದು ಸೂಕ್ತವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸುಭಾಷ ಸಂಪಗಾವಿ ಮಾತನಾಡಿ, ಜನತೆಯ ಆರೋಗ್ಯದ ದೃಷ್ಟಿಯಿಂದ ವ್ಯಾಪಾರಸ್ಥರ ನಿರ್ಧಾರ ಸೂಕ್ತವಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ವಿಠ್ಠಲ ಶಿಂಧೆ, ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ, ವರ್ಧಮಾನ ಸದಲಗೆ, ಗುಲಾಬಹುಸೇನ ಬಾಗವಾನ್, ಪ್ರವೀಣ ಕಾಂಬಳೆ, ವಿಶ್ವನಾಥ ಕಾಮಗೌಡ, ಮುಖ್ಯಾಧಿಕಾರಿ ಡಾ. ಸುಂದರ ರೋಗಿ, ಗುಲಾಬ್‌ಹುಸೇನ್ ಬಾಗವಾನ್, ಶಾಬಿರ್ ಜಮಾದಾರ, ಪುರಸಭೆ ಸದಸ್ಯರು ಹಾಗೂ ಪಟ್ಟಣದ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಬೋರಗಾಂವ: ನೆರೆಯ ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ಕರೊನಾ ದೃಢ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಪಟ್ಟಣದ ನಿವಾಸಿಗಳು ಮಾಸ್ಕ್ ಇಲ್ಲದೆ ಓಡಾಡಬಾರದು. ಮಾಸ್ಕ್ ಇಲ್ಲದೆ ಓಡಾಡಿದರೆ 200 ರೂ. ದಂಡ ವಿಧಿಸಲಾಗುವುದು ಎಂದು ಸದಲಗಾ ಪೊಲೀಸ್ ಠಾಣಾ ಉಪ ನಿರೀಕ್ಷಕ ಆರ್.ವೈ. ಬೀಳಗಿ ಎಚ್ಚರಿಕೆ ನೀಡಿದರು.
ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೋರಗಾಂವ ಪಟ್ಟಣದ ಎಲ್ಲ ಕಳ್ಳದಾರಿಗಳನ್ನು ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಆದೇಶದಂತೆ ಚೆಕ್‌ಪೋಸ್ಟ್ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಇಚಲಕರಂಜಿಗೆ ಕೆಲಸಕ್ಕಾಗಿ ಜನ ಹೋಗುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಪಾಸ್ ಪಡೆಯಬೇಕು. ಪಾಸ್ ಇಲ್ಲದೆ ಪ್ರವೇಶಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಇ-ಪಾಸ್ ಇಲ್ಲದೆ ಯಾರಿಗೂ ಪ್ರವೇಶ ನೀಡಲಾಗುವುದಿಲ್ಲ ಎಂದರು. ಮುಖ್ಯಾಧಿಕಾರಿ ಪಿ.ಬಿ. ದೇವಮಾನೆ ಮಾತನಾಡಿ, ಇಚಲಕರಂಜಿಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ, ಔಷಧ ಸಿಂಪಡಣೆ, ದೈಹಿಕ ಅಂತರ ಬಗ್ಗೆ ಸೂಚನೆ, ಸ್ಯಾನಿಟೈಸರ್, ಮಾಸ್ಕ್ ಬಗ್ಗೆ ಅರಿವು ಮೂಡಿಸಲಾಗಿದೆ. ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ ಎಂದರು.
ಪಪಂ ಉಪಾಧ್ಯಕ್ಷ ವಸಂತ ಮಹಾಜನ, ಸದಸ್ಯ ಅಭಯಕುಮಾರ ಮಗದುಮ್ಮ, ಶಿವಾನಂದ ರಾಜಮಾನೆ, ಫಾರುಕ್ ಮುಜಾವರ, ಮುಖ್ಯಾಧಿಕಾರಿ ಪಿ.ಬಿ. ದೇವಮಾನೆ, ಫಿರೋಜ್ ಅಫರಾಜ, ಅಭಯ ಕರೋಲೆ, ಬಾಬಾಸೋ ವಠಾರೆ, ಪ್ರಮೋದ ಜಂಗಟೆ, ಸದಾಶಿವ ಘೋಡಸೆ, ಶ್ರೀಕಾಂತ ದೇವರ, ಸಿದ್ದು ಗಲಗಲಿ, ಪೋಪಟ ಕುರಳೆ ಇದ್ದರು. ಸುಭಾಷ ಗಜರೆ ಸ್ವಾಗತಿಸಿದರು. ವಿಜಯ ಚೌಗುಲಾ ವಂದಿಸಿದರು.