ಅಂಗಡಿ ಬಂದ್ ಮಾಡಿ ವ್ಯಾಪಾರಸ್ಥರ ಆಕ್ರೋಶ

MARKET
Published on

ನರಗುಂದ: ಪುರಸಭೆಯಿಂದ ಗುರುತಿಸಲಾದ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಮೂಲಸೌಲಭ್ಯವಿಲ್ಲದ ಕಾರಣ ಕೆಲವರು ಬಸ್ ನಿಲ್ದಾಣ ಹತ್ತಿರದ ಶ್ರೀರಾಮ ಪೇಟೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಎಲ್ಲರಿಗೂ ಒಂದೇ ಸೂರಿನಡಿ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಪಟ್ಟಣದ ತರಕಾರಿ ವ್ಯಾಪಾರಸ್ಥರು ಗುರುವಾರ ಅಂಗಡಿಗಳನ್ನು ಬಂದ್ ಮಾಡಿ ಬಸವೇಶ್ವರ ವರ್ತುಲದ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತರಕಾರಿ ಮಾರುಕಟ್ಟೆಯಲ್ಲಿ ಬೀದಿ ದನಗಳ ಉಪಟಳ ಹೆಚ್ಚಾಗಿದೆ. ವ್ಯಾಪಾರಸ್ಥರಿಗೆ ಕುಡಿಯುವ ನೀರು, ಚರಂಡಿ, ಶೌಚಗೃಹಗಳ ವ್ಯವಸ್ಥೆಯಿಲ್ಲ. ಪುರುಷರ ಶೌಚಗೃಹ ಗಬ್ಬೆದ್ದು ನಾರುತ್ತಿದೆ. ವಿದ್ಯುತ್ ದೀಪಗಳಿದ್ದರೂ ಉರಿಯುತ್ತಿಲ್ಲ. ಪುರಸಭೆಯಿಂದ ನಿರ್ಮಿಸಿರುವ 83 ತರಕಾರಿ ಮಳಿಗೆಗಳನ್ನು ಕೆಲವರು ಕಡಿಮೆ ಬೆಲೆಗೆ ಪಡೆದು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಬಾಡಿಗೆಗೆ ನೀಡುತ್ತಿದ್ದಾರೆ. ಬಹುತೇಕ ವ್ಯಾಪಾರಸ್ಥರು ಬಸ್ ನಿಲ್ದಾಣದ ಬಳಿಯ ಶ್ರೀರಾಮಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಮುಖ್ಯ ತರಕಾರಿ ಮಾರುಕಟ್ಟೆಗೆ ಯಾರೊಬ್ಬರೂ ಬಾರದಂತಾಗಿದೆ. ಅರ್ಹ ವ್ಯಾಪಾರಸ್ಥರು ಪುರಸಭೆಗೆ ಬಾಡಿಗೆ ಪಾವತಿಸಿ ತರಕಾರಿ ವ್ಯಾಪಾರವಿಲ್ಲದೆ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇನ್ಮುಂದೆ ನಾವೆಲ್ಲರೂ ಶ್ರೀರಾಮಪೇಟೆ ಮಾರುಕಟ್ಟೆಯಲ್ಲಿಯೇ ವ್ಯಾಪಾರ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತರಕಾರಿ ವ್ಯಾಪಾರಸ್ಥರು ಪುರಸಭೆ, ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದು, ವ್ಯಾಜ್ಯ ಪೊಲೀಸ್ ಠಾಣೆ ಮೆಟ್ಟಿಲೇರಿತು.
ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ ಮಾತನಾಡಿ, ನರಗುಂದದ ತರಕಾರಿ ಮಾರುಕಟ್ಟೆಯನ್ನು ನಗರೋತ್ಧಾನ ಯೋಜನೆಯಡಿ 2 ಕೋಟಿ 15 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ನೂತನ ಮಾರುಕಟ್ಟೆ ಕಾಮಗಾರಿ ಪ್ರಾರಂಭಿಸುವವರೆಗೆ ಎಲ್ಲರೂ ಒಂದೇ ಸೂರಿನಡಿ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿತ್ತು. ಆದರೀಗ ಏಕಾಏಕಿ ಶ್ರೀರಾಮಪೇಟೆಯಲ್ಲಿ ವ್ಯಾಪಾರ ಕೈಗೊಂಡು ಅನಗತ್ಯ ಸಮಸ್ಯೆ ಸೃಷ್ಟಿಸಲಾಗಿದೆ ಎಂದರು.

ಶ್ರೀರಾಮಪೇಟೆಯಲ್ಲಿ ವ್ಯಾಪಾರ ನಡೆಸಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಅನಧಿಕೃತ ತರಕಾರಿ ಅಂಗಡಿಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

ಸಿಪಿಐ ಮಂಜುನಾಥ ನಡುವಿನಮನಿ ಮಾತನಾಡಿ, ಪುರಸಭೆ ಸದಸ್ಯರು, ಎಲ್ಲ ಅಧಿಕಾರಿ, ಸಿಬ್ಬಂದಿ ಹಾಗೂ ವ್ಯಾಪಾರಸ್ಥರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು. ಬಳಿಕ ವ್ಯಾಪಾರಸ್ಥರು ಅಂಗಡಿಗಳಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net